ಮುಡಾ ಮಾಜಿ ಆಯುಕ್ತ ನಟೇಶ್ ಗೆ ಪ್ರಾಸಿಕ್ಯೂಶನ್ : ನೋಟಿಸ್ ನೀಡಿದ ಲೋಕಾಯುಕ್ತ
2024-11-16 05:45:03
ಬೆಂಗಳೂರು, ನ.16: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರ ಪ್ರಾಸಿಕ್ಯೂಷನ್ಗೆ ಗೃಹ ಇಲಾಖೆ ಅನುಮತಿ ನೀಡಿ ಲೋಕಾಯುಕ್ತ ಪೊಲೀಸರಿಗೆ ವಿಚಾರಣೆ ನಡೆಸಲು ಅನುಮತಿ ನೀಡಿದೆ.
ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!
ಸರ್ಕಾರಿ ಅಧಿಕಾರಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ 17(A) ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಂದು ತಿಂಗಳ ಹಿಂದೆ ನಟೇಶ್ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದರು. ಇದೀಗ ಅನುಮತಿ ಬಳಿಕ ನಟೇಶ್ ಅವರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪ ಎದುರಿಸುತ್ತಿರುವ ನಟೇಶ್ ಮುಡಾದಲ್ಲಿ ಈ ಹಿಂದೆ ಆಯುಕ್ತರಾಗಿದ್ದಾಗ, ಸೈಟ್ ಮರು ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ನಟೇಶ್ 3 ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.
ಇತ್ತೀಚೆಗೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ ನಟೇಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ ಇಡಿ ಅಧಿಕಾರಿಗಳು 4 ಬ್ಯಾಗ್ ಕೊಂಡೊಯ್ದಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಮುಡಾದ ನಿರ್ಗಮಿತ ಆಯುಕ್ತರಾದ ನಟೇಶ್, ದಿನೇಶ್‌ಗೆ ಅಕ್ರಮದಲ್ಲಿ ಸಹಾಯ ಆರೋಪದಡಿ ಗುತ್ತಿಗೆ ನೌಕರ ಬಿ.ಕೆ ಕುಮಾರ್ ಎಂಬಾತನನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಮತ್ತು ಆತನ ಬಾಮೈದ ಶಿವಣ್ಣ ಇಡಿ ವಿಚಾರಣೆ ಮುಗಿದಿದ್ದು, ಮಹತ್ವದ ಮಾಹಿತಿಗಳನ್ನ ಇಡಿ ಸಂಗ್ರಹಿಸಿದೆ.
ಮತ್ತೊಂದೆಡೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತಷ್ಟು ಆರೋಪಗಳನ್ನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ 2013ರ ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿ ಪಾರ್ವತಿ ಅವರು ಸೈಟ್ ಪಡೆದಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಯಾಕಂದ್ರೆ, ಸಿದ್ದರಾಮಯ್ಯಗೆ ಮುಡಾ ವಶಪಡಿಸಿಕೊಂಡ ಬಗ್ಗೆ ಮಾಹಿತಿ ಇತ್ತು, ಹೀಗಾಗಿ ಮಾಹಿತಿ ನೀಡಿಲ್ಲ ಅಂತಾ ಒಂದಿಷ್ಟು ದಾಖಲೆ ರಿಲೀಸ್ ಮಾಡಿದ್ದಾರೆ.
comments
Log in to write reviews