ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ 40% ಲಂಚದ ಆರೋಪ ಸುಳ್ಳೆಂದ ಲೋಕಾ ತನಿಖೆ!

ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ 40% ಲಂಚದ ಆರೋಪ ಸುಳ್ಳೆಂದ ಲೋಕಾ ತನಿಖೆ!

2024-11-16 05:40:03

ಬೆಂಗಳೂರು, ನ.16: ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸೇರಿದಂತೆ ಹಲವು ಅವ್ಯವಹಾರಗಳ ಆರೋಪಗಳನ್ನು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅವ್ಯವಹಾರಗಳ ತನಿಖೆಗೆ ಆದೇಶಿಸುವ ಮೂಲಕ ಕೌಂಟರ್ ಕೊಡಲು ಮುಂದಾಗಿದೆ. ಈಗಾಗಲೇ ಕೋವಿಡ್​ ಹಗರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲು ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿತ್ತು. ಈ ಮಧ್ಯೆ, ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಗ ಅಂದಿನ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮಾಡಿದ್ದ 40 ಪರ್ಸೆಂಟ್ ಆರೋಪ ಸುಳ್ಳೆಂಬುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ.

ಬಿಬಿಎಂಪಿಯಲ್ಲಿ 40 ಪರ್ಸೆಂಟ್ ಕಮಿಷನ್ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಅಂಬಿಕಾಪತಿ ಅವರು ಆರೋಪ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಆರೋಪ ಮಾಡಲಾಗಿತ್ತು. 40 ಪರ್ಸೆಂಟ್ ಕಮಿಷನ್ ಆರೋಪವನ್ನು ರಾಜಕೀಯವಾಗಿ ಪ್ರಬಲ ಅಸ್ತ್ರ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಇದನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಕಾಂಗ್ರೆಸ್ ಬಹುತೇಕ ಯಶಸ್ವಿಯಾಗಿತ್ತು.

ಅಚ್ಚರಿಯೆಂದರೆ, ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದ್ದಾರೆ. ಅಂಬಿಕಾಪತಿ ಅಂದು ಮಾಡಿದ್ದ ಆರೋಪಗಳು ಆಧಾರರಹಿತ ಎಂಬುದು ಲೋಕಾಯುಕ್ತ ತನಿಖಾ ವರದಿಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ತನಿಖಾ ವರದಿಯಲ್ಲೇನಿದೆ?
ಆರೋಪ ಮಾಡಿರುವ ಅಂಬಿಕಾಪತಿ, ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಕಳೆದ 6 ವರ್ಷಗಳಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿದ ಗುತ್ತಿಗೆ ಪಡೆಯದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತ ದಾಖಲೆಗಳನ್ನೂ ಪರಿಶೀಲಿಸಲಾಗಿದ್ದು, ಗುತ್ತಿಗೆದಾರ ಎನ್​.ಎಂ ಕೃಷ್ಣಮೂರ್ತಿ ಕಾಮಗಾರಿ ಪೂರ್ಣಗೊಳಿಸಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಅಂಬಿಕಾಪತಿ ಎಂಬ ಗುತ್ತಿಗೆದಾರರು ನೀಡಿರುವ ತಮ್ಮ ಸಂದರ್ಶನದಲ್ಲಿ, ಆಟದ ಮೈದಾನದ ಕಾಮಗಾರಿಯ ಗುತ್ತಿಗೆಗಾಗಿ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಲಂಚ ನೀಡಿದ್ದೇನೆ ಎಂದು ಹೇಳಿರುವುದರಿಂದ, ಗೌರವಾನ್ವಿತರಿಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾದ ಮನವಿ ಅನ್ವಯ ಆದೇಶದನ್ವಯ ದೂರನ್ನು ದಾಖಲಿಸಿಕೊಳ್ಳಲಾಯಿತು. ತನಿಖೆಯನ್ನು ಲೋಕಾಯುಕ್ತ ಪೋಲೀಸರು ಮಾಡಿರುತ್ತಾರೆ. ಅಂಬಿಕಾಪತಿ ಅವರು ಯಾವ ದಿನಾಂಕದಂದು ಸಂದರ್ಶನ ಕೊಟ್ಟಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿರುವುದಿಲ್ಲ. ಆದರೆ 5 ವರ್ಷಗಳ ಹಿಂದಿನ ಅವಧಿಯಲ್ಲಿಯೂ ಸಹ ಅಂಬಿಕಾಪತಿಯವರು ಬಿಬಿಎಂಪಿಯ ಪೂರ್ವವಲಯದಲ್ಲಾಗಲೀ, ಅಥವಾ ಇತರ ವಲಯಗಳಲ್ಲಾಗಲಿ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವುದಿಲ್ಲ. ಆದ್ದರಿಂದ ಅವರು ಮಾಡಿರುವ ಆರೋಪಗಳು ಸುಳ್ಳು ಎಂದು ಲೋಕಾ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಪೊಲೀಸ್ ತನಿಖಾ ವರದಿಯನ್ನು ಒಪ್ಪಿಕೊಂಡು ಈ ದೂರಿನಲ್ಲಿ ತನಿಖೆ ಕೈಗೊಳ್ಳಬೇಕಾದ ಅಂಶ ಯಾವುದೂ ಇರುವುದಿಲ್ಲ. ಈ ದೂರನ್ನು ಮುಕ್ತಾಯಗೊಳಿಸಬಹುದಾಗಿದೆ ಎಂದು ಲೋಕಾ ತನಿಖಾ ವರದಿಯಲ್ಲಿ ಹೇಳಲಾಗಿದೆ.

ಒಟ್ಟಾರೆ ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ಅಂಟಿಕೊಂಡಿದ್ದ 40% ಲಂಚದ ಆರೋಪ‌ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೇ ಲೋಕಾಯುಕ್ತ ಪೊಲೀಸರಿಂದ ತನಿಖೆಯಾಗಿ ಅಸಲಿ ಸತ್ಯ ಬಟಾಬಯಲಾದಂತಾಗಿದೆ.

author single

L Ramprasad

Managing Director

comments

No Reviews