ಮುನಿರತ್ನರ ಇನ್ನೂ 2 ಆಡಿಯೋಗಳನ್ನು ನಾಳೆ ರಿಲೀಸ್ ಮಾಡ್ತೀನಿ: ಗುತ್ತಿಗೆದಾರ ಚಲುವರಾಜ್
2024-09-16 04:21:03
ಬೆಂಗಳೂರು, ಸೆ.16: ಕಾಂಟ್ರ್ಯಾಕ್ಟರ್ ಹಾಗೂ ಶಾಸಕ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಸದ್ಯ ಶಾಸಕ ಮುನಿರತ್ನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಶಾಸಕ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಇವೆ. ನಾಳೆ ರಿಲೀಸ್ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಲುವರಾಜು, ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ. ನಾಳೆ 2 ಆಡಿಯೋ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ.
ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ: ಚಲುವರಾಜು
ಶಾಸಕ ಮುನಿರತ್ನ ಅವರು ಗಲಾಟೆ ಸೃಷ್ಟಿಸಿ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ವೇಲು ನಾಯಕ್ ಮೇಲೆ ಆರೋಪ ಹೊರಿಸಲು ಹನುಮಂತರಾಯಪ್ಪ ಮೂಲಕ ವಿಷಯಾಂತರಕ್ಕೆ ಕುತಂತ್ರ ಮಾಡಿದ್ದರು ಎಂದು ಚಲುವರಾಜು ಆರೋಪಿಸಿದ್ದಾರೆ.
"ಬೆಳಗ್ಗೆ ನನ್ನನ್ನು ಮುನಿರತ್ನ ಅವರು ಕರೆದು ನ್ಯಾಯ ಕೊಡಿಸುತ್ತೇನೆ ಅಂದರು. ಬಳಿಕ ಹಣಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ನಾನು ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ"ಎಂದು ಗುತ್ತಿಗೆದಾರ ಚಲುವರಾಜ್ ಹೇಳಿದ್ದಾರೆ.
ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ. ಶಾಸಕನನ್ನು ಬೈಯುವುದಕ್ಕೆ ಆಗುತ್ತಾ? 3 ವರ್ಷದಿಂದ ಎಷ್ಟು ಕಷ್ಟಪಟ್ಟಿದ್ದೇನೆ ನನಗೆ ಗೊತ್ತಿದೆ. ಇದು ಒಂದು ತಿಂಗಳ ಹಿಂದೆ ನಡೆದಿರುವ ಪ್ರಕರಣ. ರೇಣುಕಾಸ್ವಾಮಿ ಹೊಡೆದು ಹಾಕಿದ್ದು ಯಾರು ಗೊತ್ತಾ?
ನನಗೆ ಶಾಸಕ ಮುನಿರತ್ನ ಅವರು ರೇಣುಕಾಸ್ವಾಮಿ ಹೊಡೆದಾಕಿದ್ದು ನನ್ನ ತಂಗಿ ಮಗ ಅಂದಿದ್ದರು. ಅವತ್ತೇ ನಾನು ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದೆ ಎಂದು ಹೇಳಿದ್ದಾರೆ.
ನಿಮ್ಮ ಹಾಗೂ ನಿಮ್ಮ ಕುಟುಂಬದ ಹಿಂದೆ ನಾನಿದ್ದೇನೆ. ಕುಟುಂಬಕ್ಕೆ ರಕ್ಷಣೆ ಕೊಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಈಗ ನನಗೆ ಧೈರ್ಯ ಬಂದಿದೆ. ನನಗೆ ಜೀವ ಭಯ ಇದೆ. ನಿನನ್ನು ಹೊಡೆದು ಹಾಕುತ್ತೇನೆ ಅಂದಿದ್ದಾರೆ. ಹಾಗಾಗಿ ನನಗೆ ರಕ್ಷಣೆ ಬೇಕೇಬೇಕು. ಪೊಲೀಸ್ ರಕ್ಷಣೆ ಬೇಕು ಎಂದು ಗುತ್ತಿಗೆದಾರ ಚಲುವರಾಜ್ ಹೇಳಿಕೊಂಡಿದ್ದಾರೆ.
comments
Log in to write reviews