ಸಿಎಂ ಸಿದ್ದರಾಮಯ್ಯ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡರೆ ಮುಂದೇನು?

ಸಿಎಂ ಸಿದ್ದರಾಮಯ್ಯ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡರೆ ಮುಂದೇನು?

2024-09-02 01:57:19

ಇಂದು ಮಧ್ಯಾಹ್ನ 2:30 ರಿಂದ  ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ಬಗ್ಗೆ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ಕ್ರಮದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಯಲಿದೆ.

ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳು...
ರಾಜ್ಯಪಾಲರ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ಆದೇಶ ನೀಡಿದರೆ ತನಿಖೆಗೆ ಅವಕಾಶ ಸಿಕ್ಕಂತಾಗುತ್ತದೆ. ಆಗ ತಕ್ಷಣವೇ ಸಿಎಂ ವಿರುದ್ಧ ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ. ಈ ವೇಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬಹುದು ಅಥವಾ ರಾಜೀನಾಮೆ ನೀಡದೇ ಕಾನೂನು ಹೋರಾಟ ಮುಂದುವರಿಸಬಹುದು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಸಿದ್ದರಾಮಯ್ಯಗೆ ಇರುತ್ತದೆ. ಈ ಮೂಲಕ ರಾಜ್ಯಪಾಲರ ವಿರುದ್ಧ ಕಾನೂನು ಸಂಘರ್ಷ ಮುಂದುವರಿಯಲಿದೆ. ಜೊತೆಗೆ ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಬಹುದು. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿ ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ರಾಜಕೀಯ ಹೋರಾಟ ಆರಂಭಿಸಬಹುದು.

ಹೀಗಾಗಿ, ಸಂಜೆವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಸಿಎಂ ನಂತರ ಮೈಸೂರಿನತ್ತ ತೆರಳಲಿದ್ದಾರೆ. ಮಂಗಳವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿರುವ ಅವರು, ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ.

ಈ ಮಧ್ಯೆ, ಸಿಎಂಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಸ್ವಇಚ್ಛೆಯಿಂದ ಕೆಲಸ ಮಾಡುತ್ತಿಲ್ಲ. ಬಿಜೆಪಿಯವರು ಹೇಳಿದಂತೆ ಮಾಡ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಸಹ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಹೈಕೋರ್ಟ್‌ನಲ್ಲಿ ಗೆಲುವು ಸಿಕ್ಕೇ ಸಿಗುತ್ತೆಂಬ ವಿಶ್ವಾಸದಲ್ಲಿ ಸಚಿವರಿದ್ದಾರೆ. ಆದರೆ, ಹೈಕೋರ್ಟ್‌ನಲ್ಲಿ ಏನಾಗುತ್ತದೆ? ಇಂದೇ ವಿಚಾರಣೆ ಮುಗಿದು ಆದೇಶ ಹೊರಬೀಳುತ್ತದೆಯೇ? ಆದೇಶ ಕಾಯ್ದಿರಿಸಬಹುದಾ? ಈ ಎಲ್ಲ ಪ್ರಶ್ನೆಗೂ ಸಂಜೆ 5 ಗಂಟೆಯೊಳಗೆ ಸ್ಪಷ್ಟ ಉತ್ತರ ಸಿಗಲಿದೆ.

author single

L Ramprasad

Managing Director

comments

No Reviews