ರೈತರ ಜಮೀನಿನ ಮೇಲೆ ವಕ್ಫ್ ಬೋರ್ಡ್ ಕಣ್ಣು: ರಾಯಚೂರು, ಕೋಲಾರ ಜಿಲ್ಲೆಗಳಿಗೂ ವ್ಯಾಪಿಸಿದ ವಿವಾದ!!!
2024-11-02 09:36:16
ರಾಯಚೂರು, ನ.2: ವಕ್ಫ್ ಬೋರ್ಡ್ ಒತ್ತುವರಿಯಿಂದ ತಮ್ಮ ಜೀವನಾಡಿ ಕೃಷಿ ಜಮೀನು ಕಳೆದುಕೊಳ್ಳೋ ಆತಂಕದಲ್ಲಿದ್ದ ರೈತರು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಕ್ಕಿದ್ದ ಹೊಸ ಅಸ್ತ್ರ ಹಿಡಿದು ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಇಳಿದಿತ್ತು. ಬಳಿಕ ರಾಜ್ಯದ ಜಿಲ್ಲೆ ಜಿಲ್ಲೆಗೂ ಹರಡಿದ್ದ ವಕ್ಫ್ ವಿವಾದ ಇದೀಗ ರಾಯಚೂರು ಜಿಲ್ಲೆಗೂ ಕಾಲಿಟ್ಟಿದೆ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ನೋಡಿ ರೈತರು ಶಾಕ್ ಆಗಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳ ರೈತರ ಸುಮಾರು 2 ಸಾವಿರ ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ಈಗಾಗಲೇ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಾಧ್ಯಮಗಳಲ್ಲಿ ವರದಿ ನೋಡಿ ಹಲವು ರೈತರು ಪಹಣಿ ಪರಿಶೀಲಿಸಿದ್ದು, ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹಣ ನೀಡಿ ಖರೀದಿಸಿದ್ದ ಜಮೀನಿನ ಪಹಣಿಯಲ್ಲೂ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಕೂಡಲೇ ವಕ್ಫ್ ಆಸ್ತಿ ಅನ್ನೋದನ್ನು ತೆಗೆದು ಹಾಕುವಂತೆ ರೈತರು ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲೂ ವಕ್ಫ್ ಆಸ್ತಿಯೆಂದು ಪಹಣಿಯಲ್ಲಿ ನಮೂದು!!!
ಅದೇ ರೀತಿಯಾಗಿ ಕೋಲಾರ ಜಿಲ್ಲೆಯಲ್ಲೂ ವಕ್ಫ್ ಆಸ್ತಿಯೆಂದು ಪಹಣಿಯಲ್ಲಿ ನಮೂದಿಸಿರುವುದು ಬೆಳಕಿಗೆ ಬಂದಿದೆ. ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದ ಅಮೀರ್ ಸಾಬ್ ಎಂಬುವರಿಗೆ ಮಂಜೂರಾಗಿದ್ದ ಫರೀರ್ ಇನಾಂತಿ 5 ಎಕರೆ 34 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.
ದೊಡ್ಡಹಸಾಳ ಗ್ರಾಮದ ಸರ್ವೆ ನಂಬರ್ 57ರಲ್ಲಿರುವ ಜಮೀನು. ಸದ್ಯ ಅಮೀರ್ ಸಾಬ್ ಕುಟುಂಬಸ್ಥರು ಆಸ್ತಿ ಪಾಲು ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ. ಕೋರ್ಟ್ಗೆ ಹಲವು ದಿನಗಳಿಂದ ಅಲೆದಾಡುತ್ತಿದ್ದಾರೆ. ಪಹಣಿಯಲ್ಲಿ ಹಾಗೂ ಮ್ಯುಟೇಷನ್ನಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಆಸ್ತಿ ತೆಗೆದುಕೊಡುಂತೆ ಅಧಿಕಾರಿಗಳ ಬಳಿ ಕುಟುಂಬ ಅಲೆಯುತ್ತಿದೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲೂ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ಜಾರಿ ಮಾಡಲಾಗಿದೆ. ಬಳ್ಳಾರಿ ತಾಲೂಕಿನ ಬೊಮ್ಮನಹಾಳದ ಒಂದೇ ಗ್ರಾಮದ 10ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಲಾಗಿದೆ. ವಕ್ಫ್ ನೀಡಿದ ನೋಟಿಸ್ಗೆ ಬಳ್ಳಾರಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಪಿತ್ರಾರ್ಜಿತ 8 ಎಕರೆ ಜಮೀನಿಗೆ ವಕ್ಫ್ ಆಸ್ತಿ ಅಂತಾ ನೋಟಿಸ್ ನೀಡಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
comments
Log in to write reviews