ವಾಲ್ಮೀಕಿ ಹಗರಣ: ಆರೋಪಿಯನ್ನು ಇಡಿ ವಶಕ್ಕೆ ಒಪ್ಪಿಸಲು ಕೋರ್ಟ್ ಆದೇಶ
2024-08-09 10:51:58
ಬೆಂಗಳೂರು, ಆ.9: ವಾಲ್ಮೀಕಿ ನಿಗಮದ ಹಗರಣದಲ್ಲಿ ಹೈದರಾಬಾದ್ ಮೂಲದ ಆರೋಪಿ ಸತ್ಯನಾರಾಯಣ ವರ್ಮಾನನ್ನು ಕಸ್ಟಡಿಗೆ ಕೋರಿ ಕೇಂದ್ರ ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 13ರಂದು ಇ.ಡಿ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಇ.ಡಿ ಕಸ್ಟಡಿಗೆ ನೀಡುವಂತೆ ಸೆಷನ್ಸ್ ಕೋರ್ಟ್ ಆದೇಶವಿದ್ದರೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಹೀಗಾಗಿ ಪೊಲೀಸರ ಕ್ರಮಕ್ಕೆ ಇ.ಡಿ ಪರ ವಕೀಲರಾದ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ಇ.ಡಿ ತನಿಖೆ ತಪ್ಪಿಸಲು ಪ ಪೊಲೀಸರು ತಂತ್ರ ಹೂಡಿದಂತಿದೆ ಎಂದು ನ್ಯಾಯಮೂರ್ತಿ
ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಆಗಸ್ಟ್ 12ಕ್ಕೆ ಪೊಲೀಸ್ ಕಸ್ಟಡಿ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 13 ರಂದು ಜಾರಿ ನಿರ್ದೇಶನಾಲಯ ಕಸ್ಟಡಿಗೆ ನೀಡುವಂತೆ ಆದೇಶಿಸಲಾಗಿದೆ.
ಹೈದರಾಬಾದ್ ಮೂಲದ ಸತ್ಯನಾರಾಯಣನನ್ನು ಎಸ್ಐಟಿ ಅಧಿಕಾರಿಗಳು ಸದ್ಯ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಹಗರಣದ ಆರೋಪಿಯಾಗಿರುವ ಸತ್ಯನಾರಾಯಣ ನಿಗಮದಲ್ಲಿ ದೋಚಿದ್ದ ಹಣದಲ್ಲೇ ಕೋಟಿ ಕೋಟಿ ರೂ. ಬೆಲೆ ಬಾಳುವ ಸೆಕೆಂಡ್ ಹ್ಯಾಂಡ್ ಲ್ಯಾಂಬೋರ್ಗಿನಿ ಮತ್ತು ಬೆಂಜ್ ಕಾರು ಖರೀದಿಸಿದ ಬಗ್ಗೆ ಎಸ್ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದರು. ಬಳಿಕ ಆ ಕಾರುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿ ಕೋಟ್ಯಾಂತರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.
ಹಗರಣದಲ್ಲಿ ಸತ್ಯನಾರಾಯಣ್ ವರ್ಮಾ 13ನೇ ಆರೋಪಿಯಾಗಿದ್ದಾರೆ. ಇತ್ತೀಚೆಗೆ ಸಿಐಡಿ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಸಿಐಡಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಂಧನದ ನಂತರ 4 ದಿನಗಳವರೆಗೆ ಅಧಿಕಾರಿಗಳು ನನ್ನ ಕುಟುಂಬಕ್ಕೆ ಮಾಹಿತಿ ನೀಡಲಿಲ್ಲ ಎಂದು ಸತ್ಯನಾರಾಯಣ್ ವರ್ಮಾ ನ್ಯಾಯಾಲಯಕ್ಕೆ ತಿಳಿಸಿದ್ದರು
comments
Log in to write reviews