ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ; ಮಾಜಿ ಕಾರ್ಯದರ್ಶಿ ಸುಮಾರವರ ಕರಾಮತ್ತು!
2024-10-17 10:29:36
ಈ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯೋದ್ದೇಶ ರೈತರು ಬೆಳೆದ ಬೆಳೆ ಮತ್ತು ಉತ್ಪನ್ನಗಳ ಸಕ್ರಮ ಮಾರಾಟದ ಜವಾಬ್ದಾರಿ ಹಾಗೂ ಸರ್ಕಾರ ಅಥವಾ ಸಮಿತಿಗೆ ಲಾಭ ತಂದುಕೊಡುವುದು. ಆದರೆ ಅಲ್ಲಿ ರೈತರ ಯಾವ ಉತ್ಪನ್ನವೂ ಸರಿಯಾಗಿ ವಿಲೇವಾರಿ ಆಗುವುದಿಲ್ಲ ಮತ್ತು ಸಕ್ರಮ ಮಾರಾಟವಂತು ಕಂಡುಬರುವುದೇ ಇಲ್ಲ. ಈ ಕುರಿತು ಸುದ್ದಿ ಮಾಡಿದರೆ ವಿವಿಧ ರೀತಿಯ ಅಕ್ರಮ, ಅವ್ಯವಹಾರಗಳ ದಿವ್ಯ ದರ್ಶನವೇ ಆದೀತು ಅದು ಮುಂದೊಮ್ಮೆ ನೋಡೋಣವಾಗಲಿ.
ಸದ್ಯ ಈ ಸಮಿತಿಯ ಮೂಲ ಕಾರ್ಯ ಮತ್ತು ಜವಾಬ್ದಾರಿ ಶುರುವಾಗುವುದು ಸಮಿತಿಯ ಅಂಗಡಿ, ಮುಂಗಟ್ಟು, ಗೋದಾಮುಗಳ ಹರಾಜು ಪ್ರಕ್ರಿಯೆ ಮತ್ತು ಆ ಮೂಲಕ ಸಮಿತಿಗೆ ಒಳ್ಳೆಯ ಲಾಭ ಮತ್ತು ಹೆಸರು ತರುವ ಉದ್ದೇಶಗಳೊಂದಿಗೆ. ಹಾಗೇ ಈ ಸಮಿತಿಯ ಭ್ರಷ್ಟಾಚಾರಗಳು ಶುರುವಾಗುವುದು ಕೂಡಾ ಇಲ್ಲಿಂದಲೇ ಅನ್ನಿ. ಹಾಗಾಗಿ ಇಂದಿನ ಈ ಸುದ್ದಿ ಸದರಿ ಅಂಗಡಿ ಮಳಿಗೆಗಳ ಹರಾಜು ಮತ್ತು ಗುತ್ತಿಗೆಯ ಭ್ರಷ್ಟಾಚಾರಕ್ಕೆ ಸಂಭಂದಪಟ್ಟದ್ದು ಮತ್ತು ಈ ಪ್ರಕ್ರಿಯೆಯಲ್ಲಿ ತಿಂದುಂಡು ಗಂಟು ಕಟ್ಟಿಕೊಂಡ ಮಾಜಿ ಕಾರ್ಯದರ್ಶಿಗಳಾದ MV. ಸುಮಾ ರವರು ಮಾಡಿರುವ ಅನಾಚಾರಕ್ಕೆ ಸಂಭಂದಪಟ್ಟಿದ್ದು ಓದಿಕೊಳ್ಳಿ.
ಈ ಅಂಗಡಿ ಮಳಿಗೆಗಳ ಹರಾಜಿಗೆ ಸಂಭಂದಿಸಿ ಎಲ್ಲಾ ಸರಕಾರಿ ಸಹಕಾರ ಮತ್ತು ಇತರೆ ಇಲಾಖೆ, ಕಚೇರಿಗಳಿಗೆ ವಿಧಿಸಿರುವಂತೆ ಅನೇಕ ನೀತಿ, ನಿಯಮ, ನಿಭಂದನೆ ಮತ್ತು ಮಾನದಂಡಗಳು ಈ ಸಮಿತಿಗೂ ವಿಧಿಸಿರುವುದುಂಟು. ಹಾಗೆ ವಿಧಿಸಿರುವ ಮಾನದಂಡಗಳಲ್ಲಿ ಒಂದಾಗಿ ಒಂದು ಅಂಗಡಿ ಮಳಿಗೆ ಒಬ್ಬ ವ್ಯಕ್ತಿಯ ಮಾಲೀಕತ್ವಕ್ಕಷ್ಟೇ ಸೀಮಿತವೆಂಬ ನಿಯಮ ಉಂಟು. ಆದರೆ ಇಸವಿ 2013 ರಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ A-13 ಸಂಖ್ಯೆಯ ಅಂಗಡಿ ಮಳಿಗೆಯೊಂದು ಮಹಮ್ಮದ್ ರಫಿ ಎಂಬುವರ ಹೆಸರಿಗೆ 5.5 ಲಕ್ಷ ರೂಗಳಿಗೆ ಗುತ್ತಿಗೆಯಾಗಿದ್ದು, ನಿಯಮದಂತೆ ಸದರಿ ಗುತ್ತಿಗೆ ಹಣದ ಪಾವತಿ ಮಾಡಿ 2019 ರವರೆಗೂ ವ್ಯಾಪಾರ, ಸಾಪಾರ ಮಾಡಿಕೊಂಡು ಬಂದಿರುತ್ತಾರೆ. ಆದರೆ ಅದೇ ಮಹಮ್ಮದ್ ರಫಿ ರವರು ಇದೇ ಕೃ. ಉ. ಮಾ ಯಲ್ಲಿ 2019 ರಲ್ಲಿ ಪುನಃ ಅಂಗಡಿ ಮಳಿಗೆಯ ಸಂಖ್ಯೆ A-10 ಕ್ಕೆ ಮತ್ತೆ ಬಿಡ್ ಸಲ್ಲಿಸಿ 14.5 ಲಕ್ಷಕ್ಕೆ ಗುತ್ತಿಗೆ ಪಡೆಯುತ್ತಾರೆ ಮತ್ತು ಗುತ್ತಿಗೆ ಹಣದ ಪೈಕಿ 25% ಮೊತ್ತ ಪಾವತಿಸಿ ಉಳಿದ ಮೊತ್ತವನ್ನು ನಿಯಮ ಪ್ರಕಾರ 90 ದಿನಗಳ ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲರಾಗಿದ್ದು ನಿಯಮದಂತೆ ಸ್ವತ್ತಿನ ಹಂಚಿಕೆಯನ್ನು ತಿರಸ್ಕರಿಸಲು ಅಥವಾ ರದ್ದುಗೊಳಿಸಲು ಸಮಿತಿಯು ತೀರ್ಮಾನಿಸಲಾಗಿ, ಸದರಿ ರಫಿ ಸಾಬ್ ರವರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆ ಆದೇಶ ತಂದು(ರಿಟ್ ಪಿ. ಸಂ -2665/2022) ಆದೇಶದಂತೆ ಸಮಯವಕಾಶ ಪಡೆದುಕೊಂಡು ಬಡ್ಡಿ ಸಮೇತ ಪಾವತಿಸಿ ಸದರಿ ಮಳಿಗೆ ತಮ್ಮ ಸುಪರ್ದಿಗೆ ಪಡೆದುಕೊಂಡು ಪ್ರಕರಣಕ್ಕೆ ಇತಿಶ್ರೀ ಹಾಡಿರುತ್ತಾರೆ ಮತ್ತು ಇಂದಿನವರೆಗೂ ಎರಡೂ ಅಂಗಡಿಗಳಿಗೆ 'ತವಕ್ಕಲ್ ಫ್ರೂಟ್ಸ್ 'ಎಂಬ ಒಂದೇ ಹೆಸರನ್ನು ಇಟ್ಟು (ಒಂದೇ ವ್ಯೆತ್ಯಾಸವೆಂದರೆ ಒಂದು ಅಂಗಡಿ 'ಕನ್ನಡದ' ತವಕ್ಕಲ್ ಇನ್ನೊಂದು 'ಇಂಗ್ಲಿಷ್' ತವಕ್ಕಲ್ ಅಷ್ಟೇ) ನಡೆಸಿಕೊಂಡು ಬರುತ್ತಿರುತ್ತಾರೆ.
ಆದರೆ ಇಲ್ಲಿ ಮಾಜಿ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದ ಶ್ರೀಮತಿ MV. ಸುಮಾ ಎಂಬುವವರು ಅವರದೇ ಕಾರ್ಯವಧಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಸದರಿ ವ್ಯೆಕ್ತಿಯ ಹೆಸರಿನಲ್ಲಿ ಈಗಾಗಲೇ ಮಳಿಗೆಯೊಂದು ಇರುವ ವಿಷಯ ಗೊತ್ತಿದ್ದರೂ ನ್ಯಾಯಾಲಯದಲ್ಲಿ ಸದರಿ ರಫಿ ಸಾಬ್ ಗೆ ವಿರುದ್ಧವಾಗಿ ಯಾವುದೇ ರೀತಿಯ ಹೋರಾಟ ಮಾಡದೆ ಅವರ ಪರವೇ ವಹಿಸಿಕೊಂಡು ಬಂದಿರುತ್ತಾರೆ. ಹಾಗೇ ಗುತ್ತಿಗೆ ಪ್ರಮಾಣ ಪತ್ರದಲ್ಲಿನ ನಿಯಮ ಸಂಖ್ಯೆ 8ರಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಮಳಿಗೆಯ ಮಾಲೀಕತ್ವ ಎಂಬ ಅಂಶದ ಜೊತೆಗೇ ನ್ಯಾಯಾಲಯದ ಆದೇಶ ವಿಷಯವನ್ನು ಕೂಡಾ ಸೇರಿಸಿ ಜಾಣ್ಮೆ ಮೆರೆದಿದ್ದಲ್ಲದೆ, ಬೇರೆ ಮಳಿಗೆಗಳ ಗುತ್ತಿಗೆ ಬಿಡ್ ಹಣಕ್ಕೆ ಇದನ್ನು ಹೋಲಿಸಿದರೆ ಲಕ್ಷಾಂತರ ಹಣದ ವ್ಯೆತ್ಯಾಸ ಕೂಡಾ ಕಂಡುಬಂದಿದ್ದು. ಈ ಕುರಿತು ಸದರಿ ಮಾಜಿಗಳನ್ನು 'ಏನ್ ಮೇಡಂ ಇದು' ಅಂತ ಪ್ರಶ್ನಿಸಿದ್ರೆ 'ನ್ಯಾಯಾಲಯದ ಆದೇಶದಂತೆ ಮಾಡೀವಿ' ಅಂದ್ರು. ಸರಿ 'ಆದೇಶ ಅಡ್ಡವಿಟ್ಟುಕೊಂಡು ಎರಡೆರಡು ಗುತ್ತಿಗೆ ಒಬ್ಬರಿಗೇ ಕೊಟ್ರಾ' ಅಂದ್ರೆ 'ತೆರೆದ ಹರಾಜು ಪ್ರಕ್ರಿಯೆಯಲ್ಲಿ ಆ ರೀತಿ ಕೊಡಲು ಅವಕಾಶವುಂಟು' ಅಂದು ಹೊಸ ಮನದಂಡವನ್ನು ಇವರೇ ಸೇರಿಸಿದ್ರು. ಮುಂದುವರೆದು ಕೆಲ ಪ್ರಶ್ನೆಗಳನ್ನು ಕೇಳಲಾಗಿ 'ನಮ್ಮದೇನಿದೆ ನಾವು ನಿಯಮಬದ್ದವಾಗಿ ಮಾಡಿದೀವಿ ನಿಮ್ಮದೇನು ಇದೆಯೋ ಅದನ್ನು ನೀವು ಮಾಡಿಕೋ ಹೋಗಿ' ಅಂದು ಬಿಟ್ರು. ಆಯ್ತು ಮೇಡಂ ತಮ್ಮ ಅಪ್ಪಣೆ ಎಂದುಕೊಂಡು ಈ ಕುರಿತು ಪ್ರಸ್ತುತ ಕಾರ್ಯದರ್ಶಿಗಳಾಗಿ ಕಾರ್ಯನಿರತವಾಗಿರುವ ಶ್ರೀಮತಿ ಪುಷ್ಪ ರವರ ಗಮನಕ್ಕೆ ತಂದು ಸಮಜಾಯಿಷಿ ಕೇಳಲಾಗಿ ನಮ್ಮ ಸಮಿತಿಯ ಮಾನದಂಡಗಳ ಪ್ರಕಾರ ಹಾಗೆ ನೀಡಲು ಬರುವುದಿಲ್ಲ ನಾನು ಪರಿಶೀಲಿಸಿ ನೋಡುತ್ತೇನೆ ಎಂದರು.
ಏನು ಪರಿಶೀಲಿಸುತ್ತಾರೋ ಏನು ನೋಡುತ್ತಾರೋ ನೋಡಿ ಏನು ಮಾಡುತ್ತಾರೋ ಸದ್ಯಕ್ಕೆ ನಾವು ಕಾದು ನೋಡಬೇಕಷ್ಟೆ.
So, ಓದುಗರೇ ಯಾವುದೇ ಸರ್ಕಾರಿ ಕಟ್ಟಡದ ಅಂಗಡಿ ಮಳಿಗೆಗಳ ಹರಾಜಿನಲ್ಲಿ ಹಲವಾರು ರೀತಿಯ ನಿಯಮ, ನಿಭಂದನೆ, ಮಾನದಂಡಗಳು ಇರುವುದು ಸಾಮಾನ್ಯ ಅವುಗಳಲ್ಲಿ ಒಂದಾಗಿ ಮೀಸಲಾತಿ. ಅದು ಈ ಸುದ್ದಿಯ ವಿಷಯದಲ್ಲಿ ಪಾಲಿಸಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ಎರಡನೇದಾಗಿ ಸಮಿತಿಗೆ ಲಾಭ ತರುವ ವಿಷಯಕ್ಕೆ ಇಲ್ಲಿ ಯಾವುದೇ ಮನ್ನಣೆ ನೀಡಿಲ್ಲ. ಹಾಗಾಗಿ ಆ ಲಾಭ ಇವರು ಪಡೆದಿರುವ ಅವಕಾಶ ಇಲ್ಲದೇ ಇಲ್ಲ. ಆದಕಾರಣ, ಮಾನದಂಡಗಳನ್ನು ಪರಿ ಪಾಲಿಸುವುದು ಸಂವಿಧಾನ ಬದ್ದವಾಗಿ ಎಲ್ಲರ ಹಾಗೂ ಸದರಿರವರ ಕರ್ತವ್ಯವಾಗಿದ್ದರೂ ಕೂಡಾ ಈ ಮಾಜಿಗಳು ಅದನ್ನು ಕಾಲ ಕೆಳಗೆ ಹಾಕಿಕೊಂಡು ಅದೆಂತ ಸೊಕ್ಕಿನಿಂದ ಉತ್ತರಿಸುತ್ತಾರೆಂದರೆ ಬಿಡಿ,
ಈ ವಿಷಯ ಕುರಿತು ಇನ್ನಷ್ಟು ಪತ್ರಿಕಾ ತನಿಖೆ ನಡೆಸಿ ಸರ್ಕಾರದ ಗಮನ ಸೆಳೆದು ಇಂತವರನ್ನು ಕಾನೂನು ಕುಣಿಕೆಗೆ ಸಿಕ್ಕಿಸಿದಾಗಲಷ್ಟೇ ಈ ನಮ್ಮ ಸುದ್ದಿಗೆ ಸಾರ್ಥಕತೆ ಸಿಗೋದು.
comments
Log in to write reviews