ತಿರುಪತಿ ಲಡ್ಡು ವಿವಾದ: ಪ್ರಧಾನಿಗೆ ಪತ್ರ ಬರೆದ ಮಾಜಿ ಸಿಎಂ ಜಗನ್
2024-09-22 05:06:36
ವಿಜಯವಾಡ, ಸೆ. 22: ತಿರುಪತಿ ತಿಮ್ಮಪ್ಪನ ಪ್ರಸಾದವಾಗಿ ನೀಡಲಾಗುವ ಲಡ್ಡುವಿನಲ್ಲಿ ಕಲಬೆರಕೆಯ ತುಪ್ಪವನ್ನು ಬಳಸಲಾಗಿದೆ ಎನ್ನುವ ಆರೋಪದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಆಪಾದಿಸಿದ್ದಾರೆ.
ಈ ವಿಚಾರವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ವಿವರಿಸಿದ್ದಾರೆ. ಹಾಲಿ ಆಂಧ್ರಪ್ರದೇಶ ಸರ್ಕಾರದ ವೈಫಲ್ಯಗಳನ್ನು ಬಚ್ಚಿಡಲು ಆಡುತ್ತಿರುವ ನಾಟಕ ಇದು. ದೇವರ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಇರುವ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ಧಾರೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಮಾಜಿ ಸಿಎಂ ಜಗನ್ ಟೀಕಾಪ್ರಹಾರ ಮಾಡಿದ್ದಾರೆ.
ದನಗಳು ಮತ್ತು ಹಂದಿಗಳ ಕೊಬ್ಬಿನ ಕಲಬೆರಕೆಯ ತುಪ್ಪದಿಂದ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ ಎನ್ನುವುದು ಈಗಿರುವ ಆರೋಪ. ಲಡ್ಡು ತಯಾರಿಸಲು ಸರಬರಾಜಾಗುವ ತುಪ್ಪದ ಸ್ಯಾಂಪಲ್ನ ಪರೀಕ್ಷೆಯಲ್ಲಿ ದನ ಮತ್ತು ಹಂದಿಯ ಮಾಂಸದ ಕೊಬ್ಬಿನ ಅಂಶಗಳನ್ನು ಬಳಸಿರುವುದು ದೃಢಪಟ್ಟಿದೆ. ಗುಜರಾತ್ನ ಲ್ಯಾಬ್ವೊಂದರಲ್ಲಿ ಇದರ ಪರೀಕ್ಷೆ ಮಾಡಲಾಗಿತ್ತು.
ಜಗನ್ಮೋಹನ್ ರೆಡ್ಡಿ ಆಂಧ್ರಪ್ರದೇಶದ ಸಿಎಂ ಆಗಿದ್ದ ಅವಧಿಯಲ್ಲಿ ತಿರುಪತಿ ಲಡ್ಡುವಿನ ಗುಣಮಟ್ಟ ಸರಿ ಇಲ್ಲ ಎಂದು ಟಿಡಿಪಿ ಚುನಾವಣೆಗೆ ಮುನ್ನವೇ ಸಾಕಷ್ಟು ಕಾಲದಿಂದ ಆರೋಪಿಸುತ್ತಾ ಬಂದಿತ್ತು. ಆದರೆ ಚಂದ್ರಬಾಬು ನಾಯ್ಡು ಸಿಎಂ ಆದ ಬಳಿಕ ಟಿಟಿಡಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಬೇರೊಂದು ಮಂಡಳಿ ರಚಿಸಿ, ಲಡ್ಡುವಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದರು. ಈ ವೇಳೆ, ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವು ಅಶುದ್ಧವೆಂಬುದು ಸಾಬೀತಾಗಿದೆ.
ರಿಜೆಕ್ಟ್ ಆಗಿದ್ದ ಸ್ಯಾಂಪಲ್ ಅದು ಎಂದ ಜಗನ್ ಈಗ ಗುಜರಾತ್ನ ಎನ್ಡಿಡಿಬಿ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾದ ತುಪ್ಪದ ಸ್ಯಾಂಪಲ್ ಅನ್ನು ಟಿಟಿಡಿಯೂ (ತಿರುಮಲ ತಿರುಪತಿ ದೇವಸ್ಥಾನಮ್ಸ್) ಪರೀಕ್ಷೆ ನಡೆಸಿತ್ತು. ಗುಣಮಟ್ಟ ಸರಿ ಇಲ್ಲದ್ದರಿಂದ ಸ್ಯಾಂಪಲ್ ತಿರಸ್ಕರಿಸಿತ್ತು. ಈ ತುಪ್ಪವನ್ನು ಪ್ರಸಾದ ತಯಾರಿಕೆಗೆ ಬಳಸಿಯೇ ಇರಲಿಲ್ಲ ಎಂದು ಮಾಜಿ ಸಿಎಂ ವೈ.ಎಎಸ್. ಜಗನ್ ಮೋಹನ್ ರೆಡ್ಡಿ ವಾದಿಸಿದ್ದಾರೆ.
ದೇವಸ್ಥಾನದಲ್ಲಿ ಬಳಸಲಾಗುವ ತುಪ್ಪದ ಖರೀದಿ ಮತ್ತು ಗುಣಮಟ್ಟ ಪರೀಕ್ಷೆಗೆ ಸುವ್ಯವಸ್ಥೆ ಇದೆ. ಹಿಂದಿನಿಂದ ನಡೆಸಿಕೊಂಡು ಬರಲಾದ ವಿಧಾನಗಳನ್ನು ತಮ್ಮ ಆಡಳಿತದಲ್ಲೂ ಮುಂದುವರಿಸಲಾಗಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಒಂದು ಸ್ಯಾಂಪಲ್ನಲ್ಲಿ ದೋಷ ಕಂಡುಬಂದರೆ ಇಡೀ ಟ್ಯಾಂಕರ್ ಅನ್ನು ತಿರಸ್ಕರಿಸಲಾಗುತ್ತಿತ್ತು ಎಂದು ಜಗನ್ ಸ್ಪಷ್ಟಪಡಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಇಲ್ಲಿ ಇನ್ನೊಂದು ಪ್ರಮುಖ ಸಂಗತಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಹಸುಗಳ ಆಹಾರ ಪದ್ಧತಿ ಇತ್ಯಾದಿ ಅಂಶಗಳು ಗುಣಮಟ್ಟ ಪರೀಕ್ಷೆಯಲ್ಲಿ ಏರುಪೇರು ಉಂಟಾಗುವಂತೆ ಮಾಡಿರುವ ಸಾಧ್ಯತೆಯೂ ಇದೆ. ಹೀಗಾಗಿ, ಆ ವಿಚಾರ ಇಟ್ಟುಕೊಂಡು ಸಂಸ್ಥೆಯ ಪ್ರಾಮಾಣಿಕತೆ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಅಪಚಾರ ಎಸಗುವುದು ಸರಿಯಲ್ಲ ಎಂದು ಜಗನ್ ಕಿಡಿಕಾರಿದ್ದಾರೆ.
comments
Log in to write reviews