ಭಾರತೀಯ ಯುವಕರನ್ನು ’ಸೈಬರ್ ಸ್ಲೇವ್ ’ ಮಾಡಿಕೊಂಡ ಚೀನೀಯರು, ಸೈಬರ್ ಸುಳಿಯಲ್ಲಿ ಸಾವಿರಾರು ಯುವಕರು !
2024-08-15 10:22:08
ಮಂಗಳೂರು, ಆಗಸ್ಟ್.15: ಷೇರು ಮಾರುಕಟ್ಟೆ, ಕ್ರಿಪ್ಟೋ ಕರೆನ್ಸಿ ಹೂಡಿಕೆ ನೆಪದಲ್ಲಿ ಸೈಬರ್ ವಂಚಕರು ಜನಸಾಮಾನ್ಯರನ್ನು ಕುಳಿತಲ್ಲೇ ಬೋಳಿಸುವುದನ್ನು ಕೇಳಿದ್ದೇವೆ. ವಂಚಕರು ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಐಟಿ ಉದ್ಯೋಗದ ನೆಪದಲ್ಲಿ ಯುವ ಜನತೆಯನ್ನು ವಿದೇಶಿ ಉದ್ಯೋಗಕ್ಕೆ ಕರೆದು ಸೈಬರ್ ಸ್ಲೇವರ್ ಆಗಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 5 ಸಾವಿರಕ್ಕೂ ಹೆಚ್ಚು ಭಾರತೀಯ ಯುವಕರು ವಿದೇಶದಲ್ಲಿ ಸೈಬರ್ ಕ್ರೈಮ್ ನಡೆಸುವುದಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವ ಅಂಶವನ್ನು ಪತ್ತೆ ಮಾಡಲಾಗಿದೆ.
ಕಾಂಬೋಡಿಯಾ, ಮಲೇಶ್ಯಾ, ಥಾಯ್ಲೆಂಡ್, ಇಂಡೋನೇಶ್ಯಾ ದೇಶಗಳಲ್ಲಿ ಐಟಿ, ಸಾಫ್ಟ್ ವೇರ್ ಉದ್ಯೋಗ ಇದೆಯೆಂದು ಆಫರ್ ನೀಡಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಇಂತಹ ಜಾಹೀರಾತುಗಳನ್ನು ನಂಬಿ ಉದ್ಯೋಗಕ್ಕೆ ಹೋದವರನ್ನು ಅಲ್ಲಿ ಸಾಫ್ಟ್ ವೇರ್ ಉದ್ಯೋಗ ನೀಡದೆ, ಸೈಬರ್ ಅಪರಾಧಿ ಕೃತ್ಯ ಮಾಡಿಸುತ್ತಾರೆ. ಫೇಸ್ಬುಕ್, ವಾಟ್ಸಪ್, ಇನ್ಸ್ ಟಾ ಗ್ರಾಮಿನಲ್ಲಿ ಹೆಣ್ಣಿನ ಹೆಸರಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿಸುವುದು, ಆನಂತರ ಭಾರತದ ಮೂಲೆ ಮೂಲೆಯ ಜನರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ವಾಟ್ಸಪ್ ನಲ್ಲಿ ಷೇರು ಮಾರ್ಕೆಟ್, ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವಂತೆ ಮೆಸೇಜ್ ಕಳಿಸುವುದನ್ನು ಇವರಿಂದಲೇ ಮಾಡಿಸುತ್ತಾರೆ. ಇದಕ್ಕೆಲ್ಲ ಆರಂಭದಲ್ಲಿ ತರಬೇತಿಯನ್ನೂ ಕೊಡಿಸುತ್ತಾರೆ ಎನ್ನುತ್ತಾರೆ, ಅಧಿಕಾರಿಗಳು.
ಇತ್ತೀಚೆಗೆ ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ವಾಟ್ಸಪ್ ನಲ್ಲಿ ಬಂದ ಮೆಸೇಜ್ ನಂಬಿ ಹೂಡಿಕೆ ಮಾಡಿ, 67 ಲಕ್ಷ ರೂ. ಕಳಕೊಂಡ ಬಗ್ಗೆ ಒಡಿಶಾದಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಪೊಲೀಸರು ಜಾಲದ ಬೆನ್ನತ್ತಿದಾಗ, ಕಾಂಬೋಡಿಯಾದಲ್ಲಿ ವಂಚಕರ ನಂಟಿರುವುದು ತಿಳಿದುಬಂದಿತ್ತು. ದೇಶದ ವಿವಿಧ ಕಡೆಗಳಲ್ಲಿ ಪ್ರಕರಣ ಸಂಬಂಧಿಸಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಅಲ್ಲದೆ, ವಿದೇಶದಲ್ಲಿರುವ 16 ಮಂದಿಯ ಬಗ್ಗೆ ಲುಕೌಟ್ ನೋಟೀಸ್ ಜಾರಿಗೊಳಿಸಿದ್ದರು. ಹರೀಶ್ ಕುರಪಾಟಿ ಮತ್ತು ನಾಗ ವೆಂಕಟ ಎಂಬವರು ಹೈದ್ರಾಬಾದ್ ಏರ್ಪೋರ್ಟ್ ಬಂದಿಳಿಯುತ್ತಿದ್ದಂತೆ ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸಿದಾಗ ಸೈಬರ್ ಗುಲಾಮರ ಪ್ರವರ ಹೊರಬಿದ್ದಿತ್ತು.
2023ರ ಮಾರ್ಚ್ ಬಳಿಕ, ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಕಾಂಬೋಡಿಯಾದಲ್ಲಿ ಐಟಿ ಉದ್ಯೋಗಕ್ಕೆ ಹೋಗಿ ಸಿಕ್ಕಿಬಿದ್ದಿರುವ 250 ಮಂದಿಯನ್ನು ಪತ್ತೆಹಚ್ಚಿ ರಕ್ಷಣೆ ಮಾಡಿದ್ದರು. ಅದರಲ್ಲೊಬ್ಬ ಸ್ಟೀಫನ್ ಎಂಬಾತ, ಮಂಗಳೂರಿನ ನಂಟನ್ನೂ ಹೇಳಿಕೊಂಡಿದ್ದ. ತನಗೆ ಮಂಗಳೂರಿನಿಂದ ಕಾಂಬೋಡಿಯಾದಲ್ಲಿ ಐಟಿ ಉದ್ಯೋಗ ಇದೆಯೆಂದು ಆಫರ್ ಬಂದಿತ್ತು. ಮಂಗಳೂರಿನ ಏಜಂಟ್ ಒಬ್ಬ ನಮ್ಮನ್ನು ಸಂಪರ್ಕಿಸಿದ್ದು, ನಾನು ಸೇರಿದಂತೆ ಆಂಧ್ರಪ್ರದೇಶದ ಮೂವರಿಗೆ ಟೂರಿಸ್ಟ್ ವೀಸಾ ಕಳಿಸಿದ್ದ. ನಾವು ಕಾಂಬೋಡಿಯಾ ತಲುಪಿದ ಬಳಿಕ ಅಲ್ಲಿ ಇಂಟರ್ವ್ಯೂ ಆಗಿತ್ತು. ಚೈನೀಸ್ ವ್ಯಕ್ತಿಯೊಬ್ಬ ಬಾಸ್ ಆಗಿದ್ದರೆ, ಮಲೇಶ್ಯನ್ ವ್ಯಕ್ತಿ ನಮ್ಮ ನಡುವೆ ದುಭಾಷಿಯಾಗಿದ್ದ. ಚೈನೀಸ್ ವ್ಯಕ್ತಿಯ ಮಾತನ್ನು ಇಂಗ್ಲಿಷಿಗೆ ಭಾಷಾಂತರಿಸಿ ಹೇಳುತ್ತಿದ್ದ. ಸಂದರ್ಶನದಲ್ಲಿ ಇಬ್ಬರು ಪಾಸ್ ಆಗಿದ್ದೆವು. ಆದರೆ ಮೂವರಿಗೂ ಕೆಲಸ ಕೊಡಲಾಗಿತ್ತು.
12 ಗಂಟೆ ಕೆಲಸ, ಅನ್ನ ನೀರಿಲ್ಲದೆ ದುಡಿಮೆ
ನಮ್ಮ ಟೈಪಿಂಗ್ ವೇಗ, ಯಾವುದರಲ್ಲಿ ಚುರುಕಿದ್ದೇವೆ ಎನ್ನುವುದನ್ನು ಚೆಕ್ ಮಾಡಿದ್ರು. ಫೇಸ್ಬುಕ್ ಗೆಳೆಯರ ಪ್ರೊಫೈಲ್ ನೋಡಿ, ಯಾರು ಸುಲಭದಲ್ಲಿ ಮೋಸ ಹೋಗುತ್ತಾರೆ ಎಂಬುದರ ಪಟ್ಟಿ ಮಾಡುವುದು ನಮ್ಮ ಕೆಲಸವಾಗಿತ್ತು. ಆನಂತರ, ನಮ್ಮಲ್ಲಿ ಹುಡುಗಿ ಹೆಸರಲ್ಲಿ ಫೇಕ್ ಫೇಸ್ಬುಕ್ ಪ್ರೊಫೈಲ್ ಕ್ರಿಯೇಟ್ ಮಾಡಲು ಸೂಚಿಸಲಾಗಿತ್ತು. ಆಗಲೇ ನಾವು ಅಪರಾಧ ಮಾಡುತ್ತಿದ್ದೇವೆ ಎನ್ನುವುದು ಗೊತ್ತಾಗಿತ್ತು. ಆದರೆ, ನಮ್ಮನ್ನವರು ಬಂಧಿಸಿಟ್ಟು ಹೇಳಿದ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು. ಉತ್ತಮ ಉದ್ಯೋಗ ದೊರಕಿಸುತ್ತೇವೆಂದು ಹೇಳುತ್ತಲೇ ನಮ್ಮನ್ನು ದಿನದ 12 ಗಂಟೆ ಕಾಲ ಅನ್ನ, ನೀರಿಲ್ಲದೆ ದುಡಿಸುತ್ತಿದ್ದರು. ಭಾರತದಲ್ಲಿ ಮೋಸದ ಜಾಲಕ್ಕೆ ಬಿದ್ದವರನ್ನು ಅವರ ಭಾಷೆ ತಿಳಿದವರಲ್ಲೇ ಮಾತನಾಡಿಸಿ, ಹಣ ಹೂಡಿಕೆಯ ಬಗ್ಗೆ ಮನವರಿಕೆ ಮಾಡುವುದನ್ನು ಮಾಡಿಸುತ್ತಿದ್ದರು ಎಂದು ಸ್ಟೀಫನ್ ಸೈಬರ್ ಅಧಿಕಾರಿಗಳ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಮೋಸದ ಬಗ್ಗೆ ಟಾರ್ಗೆಟ್ ಕೊಟ್ಟು ಪರ್ಸೆಂಟೇಜ್
ದಿನದಲ್ಲಿ ಇಷ್ಟು ಲಕ್ಷ ದುಡಿಯಬೇಕೆಂದು ಟಾರ್ಗೆಟ್ ಕೊಡುತ್ತಿದ್ದರು. ಟಾರ್ಗೆಟ್ ಪೂರೈಸದಿದ್ದಲ್ಲಿ ಅನ್ನ, ನೀರು ಕೊಡದೆ, ನಮ್ಮ ರೂಮಿಗೂ ಹೋಗಲು ಬಿಡದೆ ಸತಾಯಿಸುತ್ತಿದ್ದರು. ಮೋಸದ ಮೂಲಕ ಹೆಚ್ಚು ಹಣ ಸಂಗ್ರಹವಾದಲ್ಲಿ ಅದರಲ್ಲಿ 10-15 ಪರ್ಸೆಂಟ್ ಕೊಡುತ್ತಿದ್ದರು. ವೇತನದ ಜೊತೆಗೆ ಹೆಚ್ಚುವರಿ ಪರ್ಸೆಂಟೇಜ್ ಕೊಡುತ್ತಿದ್ದುದರಿಂದ ಅನಿವಾರ್ಯ ಎನ್ನುವಂತೆ ಅಲ್ಲಿ ಸೈಬರ್ ಅಪರಾಧಗಳನ್ನು ಮಾಡುವಂತಾಗಿತ್ತು. ಕೊನೆಗೆ, ನನ್ನ ಸಂಬಂಧಿಕರಿಗೆ ಮೋಸದ ಜಾಲದ ಬಗ್ಗೆ ತಿಳಿಸಿದ್ದು, ವಿದೇಶಾಂಗ ಇಲಾಖೆಗೆ ತಿಳಿಸುವಂತೆ ಮಾಡಿದ್ದೆ. ಆಮೂಲಕ ಬಚಾವ್ ಆಗಿ ಬಂದಿದ್ದೇನೆ ಎಂದು ಸ್ಟೀಫನ್ ಹೈದರಾಬಾದ್ ಅಧಿಕಾರಿಗಳಿಗೆ ಹೇಳಿದ್ದ. ಹೆಣ್ಮಕ್ಕಳ ಫೋಟೋವನ್ನು ಡಿಪಿಯಾಗಿ ಅಥವಾ ಫೇಸ್ಬುಕ್ ಪ್ರೊಫೈಲ್ ಬಳಸುವಾಗ ಕೇರ್ ಫುಲ್ ಇರುವಂತೆ ಸೂಚಿಸುತ್ತಿದ್ದರು. ದಕ್ಷಿಣ ಭಾರತೀಯ ಹೆಣ್ಣಿನ ಮೂಲಕ ಉತ್ತರ ಭಾರತದಲ್ಲಿ ನೆಟ್ವರ್ಕ್ ಸಾಧಿಸುವ ಗುರಿ ನೀಡಲಾಗಿತ್ತು.
ಟೂರಿಸ್ಟ್ ವೀಸಾದಲ್ಲಿ ಕರೆಸಿ ದುರ್ಬಳಕೆ
ಉದ್ಯೋಗದ ಏಜಂಟರುಗಳಿಗೆ ಉದ್ಯೋಗಕ್ಕೆ ಪರಿಣತರನ್ನು ಕಳಿಸುವ ಟಾಸ್ಕ್ ನೀಡಲಾಗಿರುತ್ತದೆ. ಜಾಬ್ ವೀಸಾ ಇಲ್ಲದಿದ್ದರೂ, ಟೂರಿಸ್ಟ್ ವೀಸಾದಲ್ಲಿ ಉದ್ಯೋಗಕ್ಕೆ ಕಳಿಸುತ್ತಿದ್ದು, ಮಲೇಶ್ಯಾ, ಕಾಂಬೋಡಿಯಾ ತಲುಪಿದೊಡನೆ ಪಾಸ್ಪೋರ್ಟ್ ತೆಗೆದಿಟ್ಟು ಅವರನ್ನು ಸೈಬರ್ ಸ್ಲೇವರ್ ಆಗಿ ದುಡಿಸುತ್ತಾರೆ. ಕೆಲಸ ಮಾಡದವರ ಮೇಲೆ ಹಲ್ಲೆ, ಇಲೆಕ್ಟ್ರಿಕ್ ಶಾಕ್ ಕೊಟ್ಟು ಚಿತ್ರಹಿಂಸೆ ಕೊಡುತ್ತಾರೆ. ಭಾರತದಿಂದ ಕೆಲಸಕ್ಕಾಗಿ ಹೋದ ಹೆಚ್ಚಿನವರು ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಒಪ್ಪಲ್ಲ. ಆದರೆ, ಚೀನೀಯರು ಮತ್ತು ಮಲೇಶ್ಯನ್ನರು ಕೆಲಸಕ್ಕಾಗಿ ಹೋಗಿ ಸಿಕ್ಕಿಬಿದ್ದವರನ್ನು ತಮಗೆ ಬೇಕಾದ ರೀತಿ ದುಡಿಸಿಕೊಳ್ಳುತ್ತಾರೆ. ಭಾರತದ ಮೂಲೆ ಮೂಲೆಗಳಲ್ಲಿ ಫೇಸ್ಬುಕ್, ವಾಟ್ಸಪ್ ಇನ್ನಿತರ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸುವುದು, ಕ್ರಿಪ್ಟೋ ಇನ್ನಿತರ ಹೆಸರಲ್ಲಿ ಹಣ ಹೂಡಿಕೆಗೆ ಪ್ರೇರೇಪಿಸಿ ಮೋಸ ಮಾಡುವುದನ್ನು ಮಾಡುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಮಂದಿ ಫೇಸ್ಬುಕ್ ಮತ್ತು ವಾಟ್ಸಪ್ ಬಳಕೆ ಮಾಡುವವರಿದ್ದು, ಸೈಬರ್ ವಂಚಕರಿಗೆ ವರದಾನವಾಗಿದೆ.
ಪ್ರಾದೇಶಿಕ ಭಾಷೆ ತಿಳಿದವರಿದ್ದರೆ ಲಾಭ
ಉದಾಹರಣೆಗೆ, ಕರ್ನಾಟಕದ ಮಂದಿಗೆ ಕನ್ನಡ ತಿಳಿದಿರುವ ವ್ಯಕ್ತಿಯಲ್ಲೇ ಕರೆ ಮಾಡಿಸಿ ಹಣ ಹೂಡಿಕೆ ಬಗ್ಗೆ ನಂಬಿಸುತ್ತಾರೆ. ಇದೇ ರೀತಿ ಮಲಯಾಳಂ, ತಮಿಳು, ತೆಲುಗು ಹೀಗೆ ಆಯಾ ಭಾಗದವರನ್ನು ಸಂಪರ್ಕಕ್ಕೆ ಬಳಸುತ್ತಾರೆ. ಆಯಾ ಭಾಗದ ಭಾಷೆ ತಿಳಿದಿದ್ದರೆ, ಜನಸಾಮಾನ್ಯರನ್ನು ನಂಬಿಸುವುದು ಸುಲಭ ಎನ್ನುವುದು ವಂಚಕರ ಟಾರ್ಗೆಟ್. ಒಡಿಶಾ ಪೊಲೀಸರು ಈ ರೀತಿಯ ಜಾಲದಲ್ಲಿ ಭಾರತ ಮೂಲದ ಮೂವರು ಮತ್ತು ನೇಪಾಳ ಮೂಲದ ಒಬ್ಬರು ಉನ್ನತ ಮಟ್ಟದಲ್ಲಿ ಕಾಂಬೋಡಿಯಾದಿಂದ ಆಪರೇಟ್ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಕಳೆದೊಂದು ವರ್ಷದಲ್ಲಿ ಸೈಬರ್ ಸ್ಲೇವರ್ ಆಗಿ ಭಾರತದ ಐಟಿ ಪರಿಣತ ಯುವಕರನ್ನು ಬಳಸಿಕೊಳ್ಳುತ್ತಿರುವುದು ಹೆಚ್ಚಿರುವುದರಿಂದ ದೇಶದ ಪ್ರಮುಖ ಏರ್ಪೋರ್ಟ್ ಗಳಲ್ಲಿ ಈ ಬಗ್ಗೆ ಜಾಗೃತಿಯ ಬ್ಯಾನರ್ ಹಾಕಲಾಗಿದೆ. ಮಲೇಶ್ಯಾ, ಕಾಂಬೋಡಿಯಾ ಐಟಿ ಉದ್ಯೋಗ ಇದೆಯಂದ್ರೆ ಯುವಕರು 2-3 ಬಾರಿ ಯೋಚನೆ ಮಾಡಬೇಕು ಎನ್ನುತ್ತಾರೆ, ಮಂಗಳೂರಿನ ಸೈಬರ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್.
ಮಾಹಿತಿ ಪ್ರಕಾರ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ದೆಹಲಿ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಾವಿರಾರು ಯುವಕರು ಐಟಿ ಉದ್ಯೋಗಕ್ಕೆಂದು ಹೋಗಿ ಮಲೇಶ್ಯಾ, ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದು, ಭಾರತೀಯರನ್ನೇ ಸೈಬರ್ ವಂಚನೆಯ ಮೂಲಕ ಮೋಸದ ಸುಳಿಗೆ ಸಿಲುಕಿಸಿ ಹಣ ದೋಚುವ ಕೆಲಸದಲ್ಲಿ ತೊಡಗಿದ್ದಾರೆ.
comments
Log in to write reviews