ದೆಹಲಿ ಸಂಭಾವ್ಯ ಸಿಎಂ ಆಗಲು  ಎಎಪಿ ಪಕ್ಷದಲ್ಲಿ ತೀವ್ರ ಪೈಪೋಟಿ

ದೆಹಲಿ ಸಂಭಾವ್ಯ ಸಿಎಂ ಆಗಲು ಎಎಪಿ ಪಕ್ಷದಲ್ಲಿ ತೀವ್ರ ಪೈಪೋಟಿ

2024-09-16 02:51:27

ದೆಹಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿ 6 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರೂ  ತಿಹಾರ್ ಜೈಲಿನಲ್ಲೇ ಕೂತು ಹಾಲಿ ಮುಖ್ಯಮಂತ್ರಿ ಎನಿಸಿ ಹೊಸ ರಾಜಕೀಯ ಅಧ್ಯಾಯ ಸೃಷ್ಟಿಸಿದ್ದರು‌. ಆದರೆ ಕೊನೆಗೂ ಹರಸಾಹಸಪಟ್ಟು ಸುಪ್ರೀಂಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಗಳಿಸಿದ ಕೇಜ್ರಿವಾಲ್ ಇದ್ದಕ್ಕಿದ್ದಂತೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ, ಹೊಸ ರಾಜಕೀಯ ರಣತಂತ್ರ ಹೆಣೆದರು. ಅಷ್ಟಕ್ಕೂ ದೆಹಲಿ ವಿಧಾನಸಭಾ ಚುನಾವಣೆ ಹತ್ತಿರ ಬಂತು ಎನ್ನುವ ಈ ಸಮಯದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಅನುಕಂಪ ಗಿಟ್ಟಿಸಲು ಕೇಜ್ರಿವಾಲ್ ಮುಂದಾಗಿದ್ದಾರೆ. ಇದಕ್ಕೆ ಕಾರಣ ಹಾಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ದೆಹಲಿ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ ಮತ್ತು ಯಾವುದೇ ಸರ್ಕಾರಿ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ಸುಪ್ರೀಂಕೋರ್ಟ್ ಷರತ್ತು ವಿಧಿಸಿ ಜಾಮೀನು ನೀಡಿತ್ತು. 

2025ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು 2024ರ ನವೆಂಬರ್‌ನಲ್ಲೇ ಚುನಾವಣೆ ನಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. 3 ತಿಂಗಳಿಗೆ ಮುನ್ನವೇ ಚುನಾವಣೆಗೆ ಹೋಗುವ ಕುರಿತಾಗಿ ಮಾತನಾಡುತ್ತಿದ್ಧಾರೆ. ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಮಯಕ್ಕೇ ದಿಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿ ಎಂದು ಕೇಜ್ರಿವಾಲ್ ಬಯಸುತ್ತಿದ್ದಾರೆ.

ಸಂಭಾವ್ಯ ಸಿಎಂ ಅಭ್ಯರ್ಥಿಗಳಲ್ಲೇ ಪೈಪೋಟಿ!

ಪ್ರಸ್ತುತ ದೆಹಲಿಯ ಎಎಪಿ ಶಾಸಕರಾದ ಅತಿಶಿ, ಸೌರಭ್ ಭಾರದ್ವಾಜ್, ಕೈಲಾಶ್ ಗಹ್ಲೋಟ್, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್ ಅವರುಗಳು ದೆಹಲಿ ಸಿಎಂ ಆಗಲು ಲಾಬಿ ಆರಂಭಿಸಿದ್ದಾರೆ.
ಜೊತೆಗೆ ಹೆಚ್ಚುವರಿಯಾಗಿ, ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ. ಯಾವುದೇ ನಿರ್ದಿಷ್ಟ ಹೆಸರುಗಳನ್ನು ಉಲ್ಲೇಖಿಸದಿದ್ದರೂ ಮುಂದಿನ ಮುಖ್ಯಮಂತ್ರಿಯಾಗಿ ದಲಿತ ನಾಯಕನನ್ನು ನೇಮಿಸಬಹುದು ಎಂಬ ಊಹಾಪೋಹಗಳು ಸಹ ಕೇಳಿಬಂದಿವೆ.

ದೆಹಲಿ ರಾಜ್ಯಸರ್ಕಾರದ ಸಚಿವೆ ಅತಿಶಿ ಅವರು ಸಿಎಂ ಸ್ಥಾನಕ್ಕೆ ಏರುವ ರೇಸ್‌ನಲ್ಲಿ ಮೊದಲ ಸಾಲಿನಲ್ಲಿ ಇದ್ದಾರೆ. ಶಿಕ್ಷಣ, ಲೋಕೋಪಯೋಗಿ ಸೇರಿದಂತೆ ಹಲವು ಪ್ರಮುಖ ಖಾತೆ ನಿಭಾಯಿಸುತ್ತಿರುವ ಅತಿಶಿಗೆ ಕೇಜ್ರಿವಾಲ್‌ ಅವರು ಸಿಎಂ ಪಟ್ಟ ಕಟ್ಟಬಹುದು ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಚಿವ ಸೌರಭ್ ಭಾರದ್ವಾಜ್ ಕೂಡಾ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಎಎಪಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಕೂಡಾ ಸಿಎಂ ರೇಸ್‌ನಲ್ಲಿ ಇದ್ದಾರೆ. ಎಎಪಿ ಸರ್ಕಾರದ ಹಿರಿಯ ಸದಸ್ಯ ಕೈಲಾಶ್ ಗೆಹ್ಲೋಟ್ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡಾ ಸಿಎಂ ರೇಸ್ ನಲ್ಲಿದ್ದಾರೆ.

ಕೇಜ್ರಿವಾಲ್‌ ಅವರು ಈಗಾಗಲೇ  ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಒಂದು ವೇಳೆ ಚುನಾವಣಾ ಆಯೋಗ ನವೆಂಬರ್‌ನಲ್ಲೇ ದೆಹಲಿ ವಿಧಾನಸಭಾ ಚುನಾವಣೆ ನಡೆಸಲು ಮುಂದಾದರೆ ಹೊಸ ಸಿಎಂ ಕೇವಲ 3 ತಿಂಗಳ ಕಾಲ ಮುಖ್ಯಮಂತ್ರಿ ಆಗಿರಲಿದ್ದಾರೆ. ಚುನಾವಣಾ ಆಯೋಗ 2025ರ ಫೆಬ್ರವರಿಯಲ್ಲೇ ಚುನಾವಣೆ ನಡೆಸಲು ಮನಸ್ಸು ಮಾಡಿದರೆ ಆಗ ನೂತನ ಸಿಎಂಗೆ 6 ತಿಂಗಳ ಕಾಲ ಸಿಎಂ ಸ್ಥಾನದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಹೀಗಾಗಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಅನುಕಂಪ ಗಿಟ್ಟಿಸಲು ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ರಣತಂತ್ರ ಹೆಣೆದಿರುವುದು ಸ್ಪಷ್ಟವಾಗಿದೆ.

author single

L Ramprasad

Managing Director

comments

No Reviews