ರಾಜಸ್ಥಾನ ರಾಜ್ಯದಲ್ಲಿ ಇನ್ನು 'ಬೀದಿ ಹಸು' ಪದ ಬಳಸುವಂತಿಲ್ಲ!
2024-10-29 08:53:40
ಜೈಪುರ, ಅ.29: ರಾಜಸ್ಥಾನದ ಬಿಜೆಪಿ ಸರ್ಕಾರವು ಗೋವುಗಳಿಗೆ ಬಳಸುವ ಭಾಷೆಯ ಬಗ್ಗೆ ಹೊಸ ಆದೇಶವನ್ನು ಹೊರಡಿಸಿದೆ. ಹೊರಗೆ ರಸ್ತೆಗಳಲ್ಲಿ ತಿರುಗಾಡುವ ಹಸುಗಳಿಗೆ ಬೀದಿ ಹಸುಗಳು ಎಂಬ ಪದವನ್ನು ಬಳಸುವುದನ್ನು ರಾಜಸ್ಥಾನ ಸರ್ಕಾರವು ನಿಷೇಧಿಸಿದೆ. ಅದು ಅವಹೇಳನಕಾರಿಯೆಂದು ಹೇಳಿರುವ ರಾಜಸ್ಥಾನ ಸರ್ಕಾರ ಅದರ ಬದಲಿಗೆ ಹೆಚ್ಚು ಗೌರವಾನ್ವಿತವಾಗಿ ನಿರ್ಗತಿಕ ಹಸುಗಳು ಎಂಬ ಪದವನ್ನು ಬಳಸಲು ಅಧಿಸೂಚನೆಯನ್ನು ಹೊರಡಿಸಿದೆ.
ಈ ಸಂಬಂಧ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ರಾಜ್ಯಸರ್ಕಾರದ ಗೋಪಾಲನಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಗೋವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಇಂದಿನ ಕಾಲದಲ್ಲಿ ನಾನಾ ಕಾರಣಗಳಿಂದ ಕೆಲವು ಹಸುಗಳು ನಿರ್ಗತಿಕರಾಗುತ್ತಿವೆ. ಅವು ಬೀದಿಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಈ ಹಸುಗಳಿಗೆ ಬೀದಿ ಹಸು ಎಂಬ ಪದವನ್ನು ಬಳಸುವುದು ಅನುಚಿತ ಮತ್ತು ಅವಹೇಳನಕಾರಿಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಮುಕ್ತವಾಗಿ ತಿರುಗಾಡುವ ಗೋವುಗಳಿಗೆ ‘ನಿರ್ಗತಿಕ’ ಎಂಬುದು ಸರಿಯಾದ ಪದವಾಗಿದೆ. ಈ ಪರಿಭಾಷೆಯು ಈ ಹಸುಗಳ ಬಗ್ಗೆ ಸಂವೇದನಾಶೀಲತೆ, ಗೌರವ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ ಎಂದು ಆದೇಶ ಹೊರಡಿಸಲಾಗಿದೆ.
ಎಲ್ಲಾ ಸರ್ಕಾರಿ ಆದೇಶಗಳು, ಮಾರ್ಗಸೂಚಿಗಳು, ಮಾಹಿತಿ ಪತ್ರಗಳು ಮತ್ತು ವರದಿಗಳಲ್ಲಿ ಡೆಸ್ಟಿಟ್ಯೂಟ್ ಪದವನ್ನು ಬಳಸಲು ಸರ್ಕಾರಿ ಇಲಾಖೆಗಳು, ಗೋಶಾಲಾ ಮತ್ತು ಇತರ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಗೋವಿಗೆ ರಾಜ್ಯ ಮಾತೆಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇಲ್ಲಿ ಉಲ್ಲೇಖಾರ್ಹ. ರಾಜಸ್ಥಾನದ ಸಿಕರ್‌ನ ಬಿಜೆಪಿ ಶಾಸಕ ಗೋರ್ಧನ್ ವರ್ಮಾ ಅವರು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಪತ್ರ ಬರೆದು ಗೋವಿಗೆ ‘ರಾಜ್ಯ ಮಾತೆ’ ಸ್ಥಾನಮಾನ ಮತ್ತು ಗೋಹತ್ಯೆ ಮಾಡುವವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದರು.
comments
Log in to write reviews