ರಾಜ್ಯಸರ್ಕಾರ ಅಭದ್ರವಾಗಿದೆ: ಹೈಕಮಾಂಡ್ ಗೆ ಪತ್ರ ಬರೆದ ಕೈ ಎಂಎಲ್ಸಿಗಳು!

ರಾಜ್ಯಸರ್ಕಾರ ಅಭದ್ರವಾಗಿದೆ: ಹೈಕಮಾಂಡ್ ಗೆ ಪತ್ರ ಬರೆದ ಕೈ ಎಂಎಲ್ಸಿಗಳು!

2024-09-10 10:01:36

ದೆಹಲಿ, ಸೆ.9: ಮೇಲ್ನೋಟಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಯಾವ ಅಬ್ಬರವೂ ಇಲ್ಲ, ಗೊಂದಲದ ವಾತಾವರಣವೂ ಇಲ್ಲ. ಸಿದ್ದರಾಮಯ್ಯ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೆ ತಾವೆಲ್ಲ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಸಾಲಿಡಾರಿಟಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಡೆಯುತ್ತಿರುವ ವಿದ್ಯಮಾನ, ದೆಹಲಿಯ ದಂಡಯಾತ್ರೆಗಳು, ನಾಯಕರ ಪ್ರತ್ಯೇಕ ಸಭೆಗಳು, ಒನ್ ಟು ಒನ್ ಲಂಚ್- ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ಬೇರೆಯದೇ ಕಥೆ ಹೇಳುತ್ತಿವೆ. ಇವೆಲ್ಲವುಗಳಿಗೆ ಬ್ರೇಕ್​ ಹಾಕಲು ಕಾಂಗ್ರೆಸ್​ ವಿಧಾನಪರಿಷತ್ ಸದಸ್ಯರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊರೆ ಹೋಗಿದ್ದಾರೆ.

ಏಕೆಂದರೆ ಈಗ ಕರ್ನಾಟಕದಲ್ಲಿ ಸಿಎಂ ಕುರ್ಚಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿ ಎಂದು ರಾಜ್ಯದ ಕೈ ಎಂಎಲ್ಸಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಂಜುನಾಥ್ ಭಂಡಾರಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಪಕ್ಷದ ನಿಯಮ ಉಲ್ಲಂಘಿಸಿ ಬಹಿರಂಗವಾಗಿಯೇ ಸಚಿವರು ಸಿಎಂ ಸ್ಥಾನದ ಆಕಾಂಕ್ಷಿಗಳೆಂದು ಹೇಳಿಕೆ ನೀಡುತ್ತಿದ್ದಾರೆ. ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್​ ಆಗುತ್ತಿದೆ. ಅಷ್ಟೇ ಅಲ್ಲದೆ ಈ ಹೇಳಿಕೆಗಳಿಂದ ರಾಜ್ಯದಲ್ಲಿ ಕೈ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಚರ್ಚೆಗಳಿಗೆ ತಡೆಹಾಕುವ ಅವಶ್ಯಕತೆ ಇದೆ ಎಂದು ಖರ್ಗೆ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಸಚಿವರು ಮೊದಲು ತಮ್ಮ ಇಲಾಖೆಗೆ ನೀಡಿದ ಯೋಜನೆ ಜಾರಿಗೆ ಕ್ರಮವಹಿಸಲಿ. ಜೊತೆಗೆ ಸಚಿವರು ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಬೇಕು. ಅದನ್ನು ಬಿಟ್ಟು ಸಿಎಂ ಆಕಾಂಕ್ಷಿ ಎಂದು ಹೇಳುವುದು ತಪ್ಪು. ಅಂಥವರ ವಿರುದ್ಧ ಪಕ್ಷ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ರಾಜ್ಯದ ಕೈ ಎಂಎಲ್ಸಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಒತ್ತಾಯಿಸಿದ್ದಾರೆ.

ಮುಡಾ ಕೇಸ್ ಫೈನಲ್ ಆಗಿಲ್ಲ. ಹೈಕೋರ್ಟ್‌ನಿಂದ ಆದೇಶ ಬಂದಿಲ್ಲ. ಕುರ್ಚಿ ಬದಲಾವಣೆ ಬಗ್ಗೆ ಹೈಕಮಾಂಡ್ ಸುಳಿವನ್ನೂ ಕೊಟ್ಟಿಲ್ಲ. ಹೀಗಿದ್ದರೂ ಕೂಸು ಹುಟ್ಟು ಮುನ್ನವೇ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ಮನೆಯಲ್ಲಿ ಕೆಲ ನಾಯಕರು ಸಿಎಂ ಆಗೋದಕ್ಕೆ ಹೊಸ ಸೂಟು ರೆಡಿ ಮಾಡಿಕೊಂಡಿದ್ದಾರೆ. ಸಿಎಂ ಕುರ್ಚಿಗೆ ನಾನು ನಾನು ಅಂತಾ ಟವೆಲ್ ಹಾಕ್ತಿದ್ದಾರೆ. ಅದಕ್ಕೆ ಅವರು ಬಳಸ್ತಿರೋ ಅಸ್ತ್ರವೇ ಸೀನಿಯರ್. ಸಚಿವರಾದ ಎಂ.ಬಿ ಪಾಟೀಲ್​, ಶಿವಾನಂದ ಪಾಟೀಲ್​, ಸತೀಶ್ ಜಾರಕಿಹೊಳಿ, ಪರಮೇಶ್ವರ್​ ಸಿಎಂ ರೇಸ್​​ನಲ್ಲಿದ್ದಾರೆ. ಇದರ ಮಧ್ಯೆ ನಾನು ಸೀನಿಯರ್ ಎಂದು ಶಾಸಕ ಆರ್​.ವಿ ದೇಶಪಾಂಡೆ ಸಹ ಕೈಎತ್ತಿದ್ದಾರೆ.

ಕಾಂಗ್ರೆಸ್​ನಲ್ಲಿನ ಈ ಸಿಎಂ ಕುರ್ಚಿ ಕಿತ್ತಾಟದಿಂದ ಬಿಜೆಪಿ ನಾಯಕರು ಲೇವಡಿ ಮಾಡಿಕೊಂಡಳು ಓಡಾಡುತ್ತಿದ್ದಾರೆ. ಆದ್ರೆ, ಇತ್ತ ಕಾಂಗ್ರೆಸ್ ಹೈಕಮಾಂಡ್​ ಮಾತ್ರ ಈ ಬಗ್ಗೆ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ.

author single

L Ramprasad

Managing Director

comments

No Reviews