ಅಂಗನವಾಡಿ ಕಾರ್ಯಕರ್ತೆಯರ ಸಂಕಷ್ಟಗಳಿಗೆ ಸ್ಪಂದಿಸದ ರಾಜ್ಯಸರ್ಕಾರ

ಅಂಗನವಾಡಿ ಕಾರ್ಯಕರ್ತೆಯರ ಸಂಕಷ್ಟಗಳಿಗೆ ಸ್ಪಂದಿಸದ ರಾಜ್ಯಸರ್ಕಾರ

2024-09-23 01:55:45

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಸರ್ಕಾರದಿಂದ  ಸಂಬಳವು ಸರಿಯಾಗಿ ಬರ್ತಿಲ್ಲ, ಮೊಟ್ಟೆ ಖರೀದಿಸಿದ ಹಣವು ಬರ್ತಿಲ್ಲ. ಇದರ ನಡುವೆ ಇದೀಗ ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಸ್ವಂತ ಹಣದಲ್ಲಿ ತರಕಾರಿ ಖರೀದಿ ಮಾಡಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರು ತಮ್ಮ ಮೇಲಾಗುತ್ತಿರುವ ಧೋರಣೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಉಪ್ಪಿಟ್ಟಿನ ಪೌಡರ್, ಸಾಂಬಾರ್ ಪೌಡರ್ ವಿತರಣೆ ಮಾಡಲಾಗುತ್ತಿದೆ. ನೀರಿನಲ್ಲಿ ಕಲಸಿ ಅಡುಗೆ ಮಾಡಿ ಕೊಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಕಳಪೆ ಗುಣಮಟ್ಟದ ಉಪ್ಪಿಟ್ಟು ತಿನ್ನಲು ಪುಟ್ಟ ಮಕ್ಕಳು ಪರದಾಡುತ್ತಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸ್ವಂತ ಹಣದಲ್ಲಿ ತರಕಾರಿ ತಂದು ಅಡುಗೆ ಮಾಡುತ್ತಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಮೊಟ್ಟೆ, ತರಕಾರಿಗೂ ಸ್ವಂತ ಹಣ ಹಾಕಿ ಕಂಗಾಲು!

ಈರುಳ್ಳಿ , ಟೊಮ್ಯಾಟೊ, ಮೆಣಸಿನಕಾಯಿ ಇಲ್ಲದೆ‌ ಉಪ್ಪಿಟ್ಟು, ಸಾಂಬಾರ್ ಮಾಡಿ ಎಂದು ರಾಜ್ಯಸರ್ಕಾರ ಹೇಳುತ್ತಿದೆ. 2 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಿಗೆ ರಾಜ್ಯಸರ್ಕಾರ ತರಕಾರಿ ವಿತರಣೆ ನಿಲ್ಲಿಸಿದೆ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡುತ್ತಿದೆ. ಕಳಪೆ ಗುಣಮಟ್ಟದ ಉಪ್ಪಿಟ್ಟು ತಿನ್ನಲು ಮಕ್ಕಳಿಂದಾಗುತ್ತಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳ ವಿತರಣೆ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ರಾಜ್ಯಸರ್ಕಾರ ಮೇ ತಿಂಗಳಿನವರೆಗೆ ಮಾತ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಿದೆ ಹಾಗೂ ಏಪ್ರಿಲ್ ವರೆಗೆ ಮಾತ್ರ ಮೊಟ್ಟೆ ಖರೀದಿಸಿರುವ ಹಣ ನೀಡಿದೆ. ಇನ್ನೂ ಉಳಿದ ತಿಂಗಳುಗಳ ಹಣ ನೀಡಿಲ್ಲ ಹೀಗಾಗಿ ತಮ್ಮ ಬಾಕಿ ಹಣ ನೀಡುವಂತೆಯೂ ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ.

ಸಿಮ್‌ ರಿಚಾರ್ಜ್‌ಗೆ ಕರೆನ್ಸಿ ಹಾಕುತ್ತಿಲ್ಲ!
ಇನ್ನು ಮತ್ತೊಂದೆಡೆ ಅಂಗನವಾಡಿಯಲ್ಲಿ ನಡೆಯುವ ನಿತ್ಯದ ಚಟುವಟಿಕೆಗಳನ್ನು ಮೊಬೈಲ್‌ನಲ್ಲಿ ದಾಖಲಿಸಿ ಇಲಾಖೆಗೆ ವರದಿ ಕಳುಹಿಸಬೇಕೆಂದು ಸರ್ಕಾರದಿಂದಲೇ ಕಾರ್ಯಕರ್ತೆಯರಿಗೆ ಬಿಎಸ್‌ಎನ್‌ಎಲ್‌ ಸಿಮ್‌ ಹಾಗೂ ಮೊಬೈಲ್​ಗಳನ್ನು ವಿತರಿಸಲಾಗಿದೆ. ಆದರೆ ಆ ಸಿಮ್‌ಗಳಿಗೆ ಕಳೆದ ಒಂದು ವರ್ಷದಿಂದ ಕರೆನ್ಸಿ ಹಾಕಿಲ್ಲ. ಕೆಲವೆಡೆ ಬಿಎಸ್‌ಎನ್‌ಎಲ್‌ ನೆಟ್ವರ್ಕ್ ಸಿಗುತ್ತಿಲ್ಲ. ಬೇರೆ ಸಿಮ್‌ ವಿತರಿಸುತ್ತೇವೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ  ಎಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.

author single

L Ramprasad

Managing Director

comments

No Reviews