ಕೇಂದ್ರ ಸಚಿವ ವಿ.ಸೋಮಣ್ಣಗೆ ಬಿಗ್ ಶಾಕ್ ಕೊಟ್ಟ ಕೈ ಸರ್ಕಾರ!
2024-08-16 05:49:54
ತುಮಕೂರು, ಆ.16: ಬಿಜೆಪಿ- ಜೆಡಿಎಸ್ ನಾಯಕರು ತಮ್ಮ ರಾಜ್ಯಸರ್ಕಾರವನ್ನು ಟಾರ್ಗೆಟ್ ಮಾಡಿದ್ದರಿಂದ ಇತ್ತ ಕಾಂಗ್ರೆಸ್ ನಾಯಕರು ಸಹ ಸಿಕ್ಕ ಸಿಕ್ಕ ಕಡೆಗಳಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ನೀಡಲಾಗಿದ್ದ ಕಚೇರಿಯನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಹಳೇ ಪರಿವೀಕ್ಷಣಾ ಮಂದಿರದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರು ಕಚೇರಿಯನ್ನು ಉಪಯೋಗಕ್ಕೆ ಪಡೆದುಕೊಂಡಿದ್ದರು. ಆದ್ರೆ, ಇದೀಗ ಅದು ಉದ್ಘಾಟನೆಗೆ ಸಿದ್ಧವಿರುವಾಗಲೇ ರಾಜ್ಯಸರ್ಕಾರ ಕೇಂದ್ರ ಸಚಿವ ಸೋಮಣ್ಣರ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.
ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೇ ಐಬಿಯನ್ನ ಸ್ಥಳೀಯ ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನೀಡಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಚೇರಿ ಎಂದು ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರುಗಳನ್ನ ಹಾಕಿಸಿದ್ದರು. ಅಲ್ಲದೇ ನಾಡಿದ್ದು ಅಂದರೆ 18-8-24ರ ಭಾನುವಾರದಂದು ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ, ಕಚೇರಿ ಉದ್ಘಾಟನೆಗೆ 2 ದಿನ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಸೋಮಣ್ಣಗೆ ಬಿಗ್ ಶಾಕ್ ಕೊಟ್ಟಿದೆ.
4 ಕೊಠಡಿಗಳನ್ನು ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣರಿಗೆ ನೀಡಲಾಗಿತ್ತು. ರಾಜ್ಯಸರ್ಕಾರ ಒಪ್ಪಿಗೆ ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ 4 ಕೊಠಡಿಗಳನ್ನ ಉನ್ನತೀಕರಣ ಮಾಡಿಸಿದ್ದರು. ಆದ್ರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.
comments
Log in to write reviews