ಟಿಬಿ ಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ವಿಫಲ: ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ
2024-08-15 10:27:58
ಹೊಸಪೇಟೆ,ಆ.15: ಇಲ್ಲಿಗೆ ಸಮೀಪವಿರುವ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿ 5 ದಿನಗಳಾಗಿವೆ. ಇದರ ಬೆನ್ನಲ್ಲೇ ಇಂದು ಆರಂಭಿಸಲಾದ ಜಲಾಶಯಕ್ಕೆ ತಾತ್ಕಾಲಿಕ ಗೇಟ್ ಅಳವಡಿಸುವ ಕಾರ್ಯ ಸ್ಥಗಿತಗೊಂಡಿದೆ.
ತಜ್ಞರು 2, 3 ಬಾರಿ ನಡೆಸಿದ ಪ್ರಯತ್ನ ವಿಫಲವಾಗಿದೆ. ಗೇಟ್‍ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಸಿಬ್ಬಂದಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ನಾಳೆ ಗೇಟ್ ಅಳವಡಿಕೆ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಾಪ್ ಲಾಕ್ ಗೇಟ್ ಕೂರಿಸುವಾಗ ಸಣ್ಣ ಮಟ್ಟದ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ವೇಳೆ ನೀರಿಗಿಳಿದು ತಾಂತ್ರಿಕ ಸಿಬ್ಬಂದಿ ಸಮಸ್ಯೆ ಸರಿಪಡಿಸಿ ಕೆಲಸ ಆರಂಭಿಸಿದ್ದರು.
2 ಬೃಹತ್ ಕ್ರೇನ್‍ಗಳ ಮೂಲಕ ಸ್ಟಾಪ್ ಲಾಗ್ ಗೇಟ್ ಇಳಿಸಿ, ಇದೇ ಮಾದರಿಯಲ್ಲಿ 5 ಎಲಿಮೆಂಟ್‍ಗಳನ್ನು ಇಳಿಸಿ ಕೂರಿಸುವ ಯೋಜನೆ ಹಾಕಿಕೊಂಡಿದ್ದರು.
ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ.
ನಿನ್ನೆಯಷ್ಟೇ ಡ್ಯಾಂ ಗೇಟ್ ನಿಪುಣ ಕನ್ನಯ್ಯ ನಾಯ್ಡು ಅವರು ನಾಳೆ ಹೊತ್ತಿಗೆಲ್ಲಾ ಶುಭ ಸುದ್ದಿ ಕೊಡುತ್ತೇನೆ, ಆದರೆ ಗೇಟ್ ಅಳವಡಿಕೆ ಕಾರ್ಯವನ್ನು ವಿಡಿಯೋ ಮಾಡುವಂತಿಲ್ಲ. ಇದೊಂದು ದೊಡ್ಡ ಸವಾಲಾಗಿದ್ದು, ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಆರಂಭಿಸಿದ್ದರು.
ಆದರೆ ಇಂದು ಗುರುವಾರ ಸಂಜೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ವಿಫಲವಾದ ಕಾರಣ ನಾಳೆಗೆ ಮೊದಲನೇ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಮುಂದೂಡಿಕೆಯಾಗಿದೆ. ಆದರೆ ಕ್ರಸ್ಟ್ ಗೇಟ್ ನಂ.19 ಕ್ಕೆ ಒಟ್ಟು 5 ಗೇಟ್ ಗಳನ್ನು ತಾತ್ಕಾಲಿಕವಾಗಿ ಅಳವಡಿಸಬೇಕಿದೆ. ಪರಿಣಾಮ ಇನ್ನೂ ಸಹ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬದಿಗೆ ಹರಿದು ಹೋಗುತ್ತಿದೆ. ನೀರನ್ನು ಉಳಿಸಿಕೊಳ್ಳಲು ತಾತ್ಕಾಲಿಕ ಗೇಟ್ ಅಳವಡಿಕೆ ಪ್ರಯತ್ನವೂ ವಿಫಲವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
comments
Log in to write reviews