ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟ: 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟ: 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

2024-09-20 08:55:30

ದಾವಣಗೆರೆ, ಸೆ.20: ನಗರದ ಬೇತೂರು ರಸ್ತೆಯಲ್ಲಿ ನಿನ್ನೆ ಗುರುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಸಮಿತಿಯ 8 ಜನ ಸೇರಿ ಎರಡು ಕೋಮುಗಳ ಒಟ್ಟು 18 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ದಾವಣಗೆರೆಯ ಎಂಸಿಸಿ ʻಎʼ ಬ್ಲಾಕ್‌ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ 18 ಜನರಿಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರು.

ಏನಿದು ಗಲಭೆ ಪ್ರಕರಣ?
ದಾವಣಗೆರೆಯ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶ ಮೆರವಣಿಗೆ ನಡೆಯುವಾಗ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಪೊಲೀಸರೂ ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿದ 3 ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಕೂಡಲೇ ಪೊಲೀಸರು ಇಡೀ ದಾವಣಗೆರೆ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಶುಕ್ರವಾರ ಬೆಳಗಿನ ವೇಳೆಗೆ ಪೊಲೀಸರು ಘಟನೆಗೆ  ಕಾರಣರಾದವರನ್ನ ಬಂಧಿಸಿದ್ದರು.

ಕಲ್ಲು ತೂರಾಟಕ್ಕೆ ಕಾರಣ ಏನು?
ಕಳೆದ 2 ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗುರುವಾರ ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮುಸ್ಲಿಂ ಮುಖಂಡರೇ ಜನಸಂದಣಿಯನ್ನು ನಿಯಂತ್ರಣ ಮಾಡಿದ್ದಾರೆ. ನಂತರ ಕೆ.ಆರ್ ರಸ್ತೆ ಹಂಸಭಾವಿ ಸರ್ಕಲ್ ನಲ್ಲಿ ಕಲ್ಲು ತೂರಾಟ ನಡೆದಿದೆ.
ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಬಂದಿದ್ದ ಇಬ್ಬರು ಪೊಲೀಸರಿಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ. ಜೊತೆಗೆ ಇಬ್ಬರು ಸಾರ್ವಜನಿಕರಿಗೆ ಸಹ ಜೋರಾಗಿ ಕಲ್ಲೇಟು ಬಿದ್ದಿದೆ. ತದನಂತರ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಗಲಭೆ ನಿಯಂತ್ರಿಸಲು ಮುಂದಾದಾಗ ಅವರಿಗೂ ಕಿಡಿಗೇಡಿಗಳು ತಲೆಗೆ ಕಲ್ಲಿನಲ್ಲಿ ಹೊಡೆದಿದ್ದಾರೆ. ಆದರೆ ನನಗೆ ಏನೂ ಆಗಿಲ್ಲ ಎಂದು ಪೆಟ್ಟು ಬಿದ್ದು ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಎಸ್ಪಿ ಉಮಾ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೊತ್ತಿಗೆ ಇಡೀ ದಾವಣಗೆರೆ ನಗರವು ಸದ್ದಿಲ್ಲದೆ ಕೋಮುಗಲಭೆಗೆ ಸಿಲುಕುವ ಅಪಾಯ ನೆನೆದು ಪೊಲೀಸರು ತಕ್ಷಣವೇ ಗಲಭೆಕೋರರನ್ನು ಇಡೀ ರಾತ್ರಿ ಹುಡುಕಿ ಹುಡುಕಿ ಅರೆಸ್ಟ್ ಮಾಡಿದ್ದಾರೆ.
ಹೀಗೆ ಶುಕ್ರವಾರ ಬೆಳಗ್ಗೆ ಒಟ್ಟು 30 ಕಿಡಿಗೇಡಿಗಳು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಇಷ್ಟಾದರೂ 8  ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 10 ಮುಸ್ಲಿಂ ಧರ್ಮದ ಕಿಡಿಗೇಡಿಗಳನ್ನು ಮಾತ್ರ ಪೊಲೀಸರು ಅರೆಸ್ಟ್ ಮಾಡಿ ಒಟ್ಟಾರೆ 18 ಗಲಭೆಕೋರರನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಹೀಗೆ ದಾವಣಗೆರೆ ನಗರದ ಎಂಸಿಸಿ 'ಎ' ಬ್ಲಾಕ್ ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸದ ಮುಂದೆ ಬಂಧಿತ 18 ಗಲಭೆಕೋರರನ್ನು ಪೊಲೀಸರು ಹಾಜರುಪಡಿಸಿದರು. ನ್ಯಾಯಾಧೀಶರು ಎಲ್ಲಾ 18 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು.

ದಾವಣಗೆರೆ ಗುರುವಾರ ರಾತ್ರಿ ಬಂದ್!
ಹೌದು, ಸದ್ದಿಲ್ಲದೆ ದಾವಣಗೆರೆ ನಗರದ ಎಲ್ಲಾ ಕಡೆ ಪೊಲೀಸರು  ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗಡಿಗಳು, ವ್ಯಾಪಾರ ಮಳಿಗೆಗಳು, ಷೋರೂಂ ಸೇರಿದಂತೆ ಎಲ್ಲವನ್ನೂ ಬಲವಂತವಾಗಿ ಮುಚ್ಚಲು ತಕ್ಷಣವೇ ಆದೇಶಿಸಿದರು. ಇದರಿಂದ ದಾವಣಗೆರೆ ನಗರದ ಸಾರ್ವಜನಿಕರು ಏನಾಗುತ್ತಿದೆ ಎಂದು ಭಯಭೀತರಾದರು. ಹೀಗೆ ಇದ್ದಕ್ಕಿದ್ದಂತೆ ಇಡೀ ದಾವಣಗೆರೆ ನಗರ ಗುರುವಾರ ರಾತ್ರಿ 8:30 ರಿಂದ ಬಂದ್ ಆಗಿತ್ತು. ಇದರಿಂದ ಸಾರ್ವಜನಿಕರು ತಮಗೆ ಬೇಕಿದ್ದ ವಸ್ತುಗಳನ್ನು ಖರೀದಿಸಲಾಗದೆ ಪೊಲೀಸರಿಗೆ ಹಿಡಿಶಾಪ ಹಾಕಿದ್ದು ಎದ್ದು ಕಂಡಿತು.
ಸದ್ಯ ದಾವಣಗೆರೆ ನಗರಕ್ಕೆ ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ 4 ಜಿಲ್ಲೆಗಳ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿ ಮತ್ತಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಸ್ತು ತಿರುಗುತ್ತಿದ್ದಾರೆ.‌
ಈ ಬಗ್ಗೆ ಪೂರ್ವ ವಲಯದ ಐಜಿಪಿ ರಮೇಶ್ ಬಾನೋತ್ ಅವರು ಹೇಳಿಕೆ ನೀಡಿ, ಗುರುವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ ಒಟ್ಟು 30 ಆರೋಪಿಗಳನ್ನು ಬಂಧಿಸಲಾಗಿದೆ. ಈ ಗಲಭೆ ಬಗ್ಗೆ ಒಟ್ಟು 5 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಗುರುವಾರ ರಾತ್ರಿ ನಡೆದ ಗಲಭೆ ವೇಳೆ ಕೇವಲ 4 ಪೊಲೀಸರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಅವರಲ್ಲಿ ಇಬ್ಬರು ಪೊಲೀಸರಿಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರೊಬ್ಬರಿಗೆ ಕಲ್ಲು ತೂರಾಟದಿಂದ ಗಾಯಗೊಂಡಿದ್ದು ಆ ಬಗ್ಗೆ ಪ್ರಕರಣ ದಾಖಲಾಗಿದೆ. 
ಆದರೆ ಶುಕ್ರವಾರ ಬೆಳಗ್ಗೆ 4 ಜಿಲ್ಲೆಗಳ ಎಸ್ಪಿಗಳು ಮತ್ತು KSRP ತುಕಡಿಗಳು ಹೆಚ್ಚಿನ ಬಂದೋಬಸ್ತ್ ಕಲ್ಪಿಸಿದ್ದಾರೆ. ಆದ್ದರಿಂದ ದಾವಣಗೆರೆ ನಗರ ಇದೀಗ ಸಹಜ ಸ್ಥಿತಿಗೆ ಮರಳಿದೆ.  ಆದಾಗ್ಯೂ ಶುಕ್ರವಾರ ರಾತ್ರಿಯಿಡೀ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಗಸ್ತು ತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

author single

L Ramprasad

Managing Director

comments

No Reviews