ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ಬಂಧನ ಭೀತಿ: ಬಿಜೆಪಿ ವಿರುದ್ಧ ಕೋವಿಡ್ ಹಗರಣ ಪ್ರತ್ಯಸ್ತ್ರ!
2024-10-11 09:09:47
ಬೆಂಗಳೂರು, ಅ.10: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಕೆಡವಲು ಪ್ಲ್ಯಾನ್ ಮಾಡಿದ್ದ ಬಿಜೆಪಿ ನಾಯಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಸರ್ಕಾರ ಸಜ್ಜಾಗಿದೆ. ಬಿಜೆಪಿ ಅವಧಿಯಲ್ಲಿನ ಕೋವಿಡ್ ಹಗರಣ ಆರೋಪ ವಿಚಾರವಾಗಿ ಹೆಚ್ಚಿನ ಕ್ರಮತೆಗೆದುಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಏಳು ಸಚಿವರನ್ನೊಳಗೊಂಡ ಉಪಸಮಿತಿ ರಚನೆ ಮಾಡಲಾಗಿದೆ.
ಸಮಿತಿಯಲ್ಲಿ ಯಾರೆಲ್ಲಾ?
ಸಚಿವರಾದ ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಶರಣ್ ಪ್ರಕಾಶ್ ಪಾಟೀಲ್ ಒಳಗೊಂಡಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಉಪಸಮಿತಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ವಾಲ್ಮೀಕಿ, ಮುಡಾ ಕೇಸ್ಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಉರುಳು ಬಿಗಿ ಆಗುತ್ತಿದ್ದಂತೆ ಬಿಜೆಪಿ ಹಣಿಯೋದಕ್ಕೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಕೇಸ್ ನಲ್ಲಿ ಇ.ಡಿ ಬಂಧಿಸಲು ಮುಂದಾದರೆ ಬಿಜೆಪಿ ನಾಯಕರ ಬಂಧನಕ್ಕೂ ಸಿದ್ದತೆ ನಡೆದಿದೆ. ಈ ಬಗ್ಗೆ ಇಂದಿನ ಕ್ಯಾಬಿನೆಟ್ ಮೀಟಿಂಗ್ನಲ್ಲೂ ಗಂಭೀರ ಚರ್ಚೆ ಮಾಡಲಾಗಿದೆ. ಪ್ರಥಮ ಅಸ್ತ್ರವಾಗಿ ಕೋವಿಡ್ ಹಗರಣವನ್ನ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗ ಮಧ್ಯಂತರ ವರದಿ ಆಧರಿಸಿ ಎಸ್ಐಟಿ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಕೋವಿಡ್ ಹಗರಣ ಬಗ್ಗೆ ಕ್ರಮಕ್ಕೆ ಶಿಫಾರಸ್ಸು ಮಾಡಲು ಕ್ಯಾಬಿನೆಟ್ ಸಬ್ ಕಮಿಟಿ ಕೂಡ ರಚನೆ ಮಾಡಲು ತೀರ್ಮಾನ ಆಗಿದೆ. ಶೀಘ್ರದಲ್ಲೇ ಎಸ್ಐಟಿ ಹಾಗೂ ಸಬ್ ಕಮಿಟಿ ರಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದ್ದು, ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗಟ್ಟಲು ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆ.
ಕುನ್ಹಾ ತನಿಖಾ ಆಯೋಗ 11 ಸಂಪುಟಗಳಲ್ಲಿ ಭಾಗಶಃ ವರದಿ ಸಲ್ಲಿಸಿದೆ. ಸುಮಾರು 7223.64 ಕೋಟಿ ರೂ. ಮೊತ್ತದ ಅವ್ಯವಹಾರ ಆಗಿದೆ. 55 ಸಾವಿರ ಕಡತಗಳನ್ನ ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ತನಿಖೆ ನಡೆಸಲಾಗಿದೆ. ಈ ಪೈಕಿ 500 ಕೋಟಿ ರೂ. ಮೊತ್ತದ ವಸೂಲಾತಿಗೆ ಆಯೋಗ ಶಿಫಾರಸ್ಸು ಮಾಡಿದೆ ಅಂತಾ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಜಸ್ಟೀಸ್ ಕುನ್ಹಾ ಇಂಟರಿಮ್ ರಿಪೋರ್ಟ್ ಕೊಟ್ಟಿದ್ದಾರೆ. ಇಷ್ಟು ದಿನ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿರಲಿಲ್ಲ. ಏನು ಕ್ರಮ ಆಗಬೇಕು ಅನ್ನೋದನ್ನ ಕ್ಯಾಬಿನೆಟ್ನಲ್ಲೇ ತೀರ್ಮಾನ ಮಾಡುತ್ತೇವೆ. ಬಿಟ್ ಕಾಯಿನ್ ಹಗರಣದ ಚರ್ಚೆ ಕೂಡ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
comments
Log in to write reviews