ಶಾಸಕ ಮುನಿರತ್ನಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್!
2024-09-14 08:36:36
ಬೆಂಗಳೂರು, ಸೆ,14: ಬಿಬಿಎಂಪಿ ವಾರ್ಡ್ ಕಸ ವಿಲೇವಾರಿ ಗುತ್ತಿಗೆ ನೀಡಲು ಗುತ್ತಿಗೆದಾರನಿಂದ ಲಂಚ ಕೇಳಿ ಪ್ರಾಣ ಬೆದರಿಕೆ ಒಡ್ಡಿದ ಆರೋಪದ ಮೇಲೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೋಲಾರದಲ್ಲಿ ಅರೆಸ್ಟ್ ಆಗಿರುವ ಶಾಸಕ ಮುನಿರತ್ನ ಅವರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.
ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿರುವ ಶಾಸಕ ಎಂ. ಮುನಿರತ್ನಂ ನಾಯ್ಡು ಅವರಿಗೆ ಬಿಜೆಪಿ ಪಕ್ಷದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಪಾಲಿಕೆ ಗುತ್ತಿಗೆದಾರನಿಂದ ಲಂಚ ಕೇಳಿ ಪ್ರಾಣ ಬೆದರಿಕೆ ಹಾಕಿದ ಆರೋಪದ ಪ್ರಕರಣದ ಬಗ್ಗೆ 5 ದಿನಗಳಲ್ಲಿ ಸ್ಪಷ್ಟೀಕರಣ ನೀಡುವಂತೆ ಶಾಸಕ ಮುನಿರತ್ನ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಸೂಚಿಸಿ ಶೋಕಾಸ್ ನೋಟಿಸ್ ನೀಡಿದೆ.
ಮೊದಲು ಚಲನಚಿತ್ರ ನಿರ್ಮಾಪಕರಾಗಿ ಭರ್ಜರಿ ಯಶಸ್ಸು ಗಳಿಸಿ ನಂತರ ಕಾಂಗ್ರೆಸ್ ಪಕ್ಷದಿಂದ 2 ಬಾರಿ ಬೆಂಗಳೂರು ಕಾರ್ಪೊರೇಟರ್ ಆಗಿದ್ದ ಮುನಿರತ್ನ ಅವರು 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾದರು. ನಂತರ 2018 ರಲ್ಲಿಯೂ ಕೂಡ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಮುನಿರತ್ನ ಅವರು 2019 ರಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಸೇರಿ ಕಾಂಗ್ರೆಸ್ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸಲು ನೆರವಾಗಿದ್ದರು. ಇದಾದ ನಂತರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾಗಿ ಮುನಿರತ್ನ ಆಯ್ಕೆಯಾಗಿದ್ದರು. ಬಳಿಕ ಒಂದುವರೆ ವರ್ಷ ಕಾದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ 2023 ರ ವಿಧಾನಸಭಾ ಚುನಾವಣೆಯಲ್ಲೂ ಮತ್ತೊಂದು ಬಾರಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ತೆಲಂಗಾಣ ಚುನಾವಣಾ ಉಸ್ತುವಾರಿಯಾಗಿ ಎಂ.ಮುನಿರತ್ನಂ ನಾಯ್ಡು ಕಾರ್ಯನಿರ್ವಹಿಸಿದ್ದರು.
ಇಷ್ಟಾದರೂ ಇದೀಗ ಬಿಜೆಪಿ ಪಕ್ಷದಿಂದಲೇ ಶೋಕಾಸ್ ನೋಟಿಸ್ ಪಡೆದ ಶಾಸಕ ಮುನಿರತ್ನ ಅವರು ಮುಖಭಂಗ ಅನುಭವಿಸಿದಂತಾಗಿದೆ.
comments
Log in to write reviews