ತಹಸೀಲ್ದಾರ್ ಕಚೇರಿಯಲ್ಲೇ SDA ಆತ್ಮಹತ್ಯೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ವಿರುದ್ಧ FIR!
2024-11-05 09:50:27
ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ಮತ್ತಿತರ ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ ಎಂದು ಬೆಳಗಾವಿಯ ಪೊಲೀಸರು ತಿಳಿಸಿದ್ದಾರೆ.
ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಎಲ್ಲ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 4ರ ರಾತ್ರಿ 7.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದ ಸಂದೇಶವನ್ನು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ್, ಕಚೇರಿ ಸಿಬ್ಬಂದಿ ಅಶೋಕ್ ಕಬ್ಬಲಿಗಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ ಸೋಮು ನೇರ ಕಾರಣ ಎಂದು ಮೃತ ರುದ್ರಣ್ಣ ಯಡವಣ್ಣನವರ ಉಲ್ಲೇಖಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ತನಿಖೆ ಮಾಡುತ್ತಿದ್ದೇವೆ, ಅವುಗಳು ಎಫ್‌ಐಆರ್‌ನ ಭಾಗವಾಗಿವೆ. ತನಿಖೆಯ ಭಾಗವಾಗ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ತಹಶೀಲ್ದಾರ್ ಅವರ ಕೊಠಡಿಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇಂದು ಬೆಳಗ್ಗೆ ನಮ್ಮ ಇನ್ಸ್‌ಪೆಕ್ಟರ್‌ಗೆ ಮಾಹಿತಿ ಲಭಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಆತ ಮುಸುಕು ಹಾಕಿಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಗುರಿಯಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ, ಟೀಕಾ ಪ್ರಹಾರ ಮಾಡುತ್ತಿದೆ. ಸಾಲು ಸಾಲು ಅಧಿಕಾರಿಗಳನ್ನು ನಿರಂತರವಾಗಿ ಬಲಿ ಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ದಾಹ ತೀರಿದಂತೆ ಕಾಣುತ್ತಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
comments
Log in to write reviews