ಸಜ್ಜನ್ ರಾವ್ ವೃತ್ತ

ಸಜ್ಜನ್ ರಾವ್ ವೃತ್ತ

2024-07-30 09:03:05

ಕರ್ನಾಟಕದಲ್ಲಿ ಕುಡಿಯಲು ನೀರು ಕೇಳಿದರೆ, ಕನ್ನಡಿಗರು  ನೀರಿನ ಜೊತೆ ಬೆಲ್ಲವನ್ನು ನೀಡುವಂತಹ ಸಹೃದಯಿಗಳು ಎಂದೇ ಪ್ರಪಂಚಾದ್ಯಂತ ಪ್ರಖ್ಯಾತರಾಗಿದ್ದಾರೆ, ಉಪಕಾರ ಮಾಡುವುದರಲ್ಲೂ ಮತ್ತು ಉಪಕಾರ ಮಾಡಿದವರನ್ನು ಸ್ಮರಿಸುವುದರಲ್ಲೂ ಕನ್ನಡಿಗರದದ್ದು ಎತ್ತಿದ ಕೈ. ಅದರಲ್ಲೂ ಮೈಸೂರು ಸಂಸ್ಥಾನದ ಒಡೆಯರುಗಳು ಈ ಪ್ರಕ್ರಿಯೆಯಲ್ಲಿ ಅಗ್ರೇಸರರು ಎಂದರೂ ತಪ್ಪಾಗದು. ನೆಲ, ಜಲ, ನಾಡು ಮತ್ತು ನುಡಿಗಾಗಿ ಸೇವೆ ಸಲ್ಲಿಸಿದವರ ಹೆಸರುಗಳು ಆಚಂದ್ರಾರ್ಕವಾಗಿ ಅಮರವಾಗಿರಬೇಕೆಂದು ತಮ್ಮ ಸಂಸ್ಥಾನದ ಪ್ರಖ್ಯಾತ ನಗರಗಳಾದ ಬೆಂಗಳೂರು, ಮೈಸೂರು ಮುಂತಾದ ಊರುಗಳ ಬಡಾವಣೆಗಳು ಮತ್ತು ವೃತ್ತಗಳಿಗೆ ಅಂತಹ ಮಹನೀಯರ ಹೆಸರುಗಳನ್ನಿಡುವ ಮೂಲಕ ನಾಡಿನ ಜನತೆ ಅವರನ್ನು ಸಹಾ ಕಾಲವೂ ನೆನಪಿಸಿಕೊಳ್ಳುವಂತೆ ಮಾಡಿದರು,  ಇದ್ದಕ್ಕೆ ಜ್ವಲಂತ ಉದಾಹರಣೆ ಎನ್ನುವಂತೆಯೇ  ಬೆಂಗಳೂರಿನ ವಿಶ್ವೇಶ್ವರ ಪುರದ (ವಿ.ವಿ ಪುರ) ಪ್ರಮುಖ ಪ್ರದೇಶವಾದ ಸಜ್ಜನ್ ರಾವ್ ವೃತ್ತದ ಬಗ್ಗೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

sajjan3ಸಜ್ಜನ್ ರಾವ್  ಅವರು ಮೂಲತ: ಮಂಡ್ಯಾ ಜಿಲ್ಲೆಯ ಮದ್ದೂದರಿನ ತಗ್ಗಲ್ಲ ಎಂಬ ಗ್ರಾಮದವರಾಗಿದ್ದು ಸಾಮಾನ್ಯ ಬಡ ಕುಟುಂಬದಲ್ಲಿ 1868 ರಲ್ಲಿ ಜನಿಸಿದರು. ಬಾಲ್ಯದಿಂದಲೂ  ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ ತಮ್ಮ ಹುಟ್ಟೂರು ಮತ್ತು  ಅದರ ಆಸುಪಾಸಿನಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸ ಕಾರ್ಯಕ್ಕೆ ಅನುವಾಗುತ್ತಿದ್ದಂತಹ ಸಂಧರ್ಭದಲ್ಲಿಯೇ  ಅವರು ತಾಯಿಯ ಚಿಕ್ಕಪ್ಪ ನವರಾಗಿದ್ದ ಶ್ರೀ ಬೋಜಗಡೆ ವೆಂಕಟರಾಯರು  ಅದಾಗಲೇ ಬೆಂಗಳೂರಿನಲ್ಲಿ ನಡೆಸುತ್ತಿದ್ದ  ಅಂಗಡಿಯ ಸಹಾಯಕರಿಗೆ ಹುಡುಕುತ್ತಿದ್ದದ್ದನ್ನು ಕೇಳಿ ಸಜ್ಜನ್ ರಾವ್  ಅವರೇ ತಮ್ಮ ತಾತನ  ಅಂಗಡಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ಬುದ್ಧಿ ಶಕ್ತಿ ಮತ್ತು ಕಠಿಣ  ಪರಿಶ್ರಮದ ಮೂಲಕ ನೋಡ ನೋಡುತ್ತಿದ್ದಂತೆಯೇ ಅವರ ವ್ಯಾಪಾರ ವಹಿವಾಟುಗಳು ಉತ್ತಮವಾಗಿ ಅಂಗಡಿಯಲ್ಲಿ ಕೆಲಸ ಮಾಡಲು ಬಂದಿದ್ದಂತಹ ವ್ಯಕ್ತೆ ಕೆಲವೇ ವರ್ಷಗಳಲ್ಲಿ  ಬೆಂಗಳೂರಿನ  ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗುತ್ತಾರೆ ಎಂದರೆ ಅವರ ಕಾರ್ಯತತ್ಪರತೆ ಮತ್ತು ಕೆಲಸದಲ್ಲಿನ ಸಮರ್ಪಣಾ ಭಾವದ ಅರಿವಾಗುತ್ತದೆ.

sajjan_Rroಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೊ

ಹರಿಯ ಕರುಣದಲಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ

ಸಿರಿಪುರಂದರವಿಠಲರಾಯನ ಚರಣಕಮಲದ ನಂಬಿ ಬದುಕಿರೊ ಎನ್ನುವ ಪುರಂದರ ದಾಸರ ವಾಣಿಯನ್ನು ಅಕ್ಷರಶಃ ಪಾಲಿಸಿದ ಸಜ್ಜನರಾವ್ ಅವರು ತಾವು ಕಷ್ಟ ಪಟ್ಟು ಸಂಪಾದಿಸಿದ ಅಷ್ಟೋಂದು ಆಸ್ತಿ ಪಾಸ್ತಿಯನ್ನು ಕೇವಲ ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಮಾತ್ರವೇ ಸೀಮಿತಗೊಳಿಸದೇ ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಸಮಾಜಕ್ಕೆ ವಿನಿಯೋಗಿಸಿ  ತಮ್ಮ ಹೆಸರಿಗೆ ಅನ್ವರ್ಥದಂತೆ ಸಜ್ಜನರಾಗಿಯೇ ಕನ್ನಡಿಗರ ಮನದಾಳದಲ್ಲಿ ಉಳಿದು ಹೋದರು ಎಂದರೂ ತಪ್ಪಾಗದು.

subramanaya_templeಸಜ್ಜನ್ ರಾವ್ ಅವರು ತಮ್ಮ ಸಮಾಜ ಸೇವೆಯನ್ನು ಮೊದಲಿಗೆ  ಲಾಲ್ ಬಾಗ್ ಬಳಿಯ ಕೂಗಳತೇ ದೂರದಲ್ಲಿದ್ದ ಹೊಲ ಗದ್ದೆಗಳಿದ್ದ ಪ್ರದೇಶದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯವನ್ನು ಜೂನ್ 22, 1856ರಲ್ಲಿ ಕಟ್ಟಿಸುವ ಮೂಲಕ ಪ್ರಾರಂಭಿಸಿದರು. ವಿಶಾಲವಾಗಿ ದ್ರಾವಿಡ ಶೈಲಿಯ ಶಿಲ್ಪಕಲೆಯಲ್ಲಿ ಕಟ್ಟಿಸಿದ ಆ  ದೇವಾಲಯದಲ್ಲಿ ಸುಬ್ರಹ್ಮಣ್ಯಸ್ವಾಮಿ  ಮತ್ತು ಅವನ ಪತ್ನಿಯರಾದ ವಲ್ಲಿ ಹಾಗು ದೇವಯಾನಿ ಮೂಲ ದೇವರುಗಳ ಜೊತೆ ಶ್ರೀ ಕೃಷ್ಣ, ರಾಧಾ, ರುಕ್ಮಿಣಿ, ಆಂಜನೇಯ, ವಿಘ್ನೇಶ್ವರ, ಚಂಡಿಕೇಶ್ವರ, ದಕ್ಷಿಣಾ ಮೂರ್ತಿ ಹಾಗು ನವಗ್ರಹಗಳು ಇಂದಿಗೂ ಸಹಾ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿದ್ದು ವರ್ಷಕ್ಕೊಮೆ ಬರುವ ಸುಬ್ಬರಾಯನ ಶ್ರಷ್ಠಿಯಂದು ದೇಶ ವಿದೇಶಗಳಿಂದ ಬರುವ ಸಹಸ್ರ ಸಹಸ್ರ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯ ಬೆಳ್ಳಿ ರಥೋತ್ಸವ ನಡೆಯುತ್ತದೆ.

subramanya_swamy1909ರಲ್ಲಿ, ತಮ್ಮ  ಆಶ್ರಯದಾತರಾದ ಶ್ರೀ ವೆಂಕಟರಾವ್ ಭೋಜಗಡೆಯವರ ನೆನಪಿಗಾಗಿ,  ಅದೇ ದೇವಾಲಯದ ಸಮೀಪವೇ ಉಚಿತ ವಸತಿ ನಿಲಯವನ್ನು ಆರಂಭಿಸಿದರು. ಅಂದು ಅವರು ಸ್ಥಾಪಿಸಿದ ಆ ವಸರಿ ನಿಲಯ ಇಂದಿಗೂ  ಮರಾಠಾ ಹಾಸ್ಟೆಲ್ ಎಂದೇ ಪ್ರಖ್ಯಾತವಾಗಿದೆ. ಎಗ್ಗಿಲ್ಲದೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಬೆಂಗಳೂರಿನ ನಗರದ ವಾಸಿಗಳ ವಸತಿಗಾಗಿ ಒಂದು ಒಳ್ಳೆಯ ಬಡಾವಣೆಯನ್ನು ನಿರ್ಮಿಸುವ ಸಲುವಾಗಿ 1920ರ ಆಸುಪಾಸಿನಲ್ಲಿ  ಬಡಾವಣೆಯನ್ನು ನಿರ್ಮಾಣ ಮಾಡಲು ಮುಂದಾದ ಮಹಾರಾಜರು ಅದರ ನೀಲನಕ್ಷೆಯನ್ನು ತಯಾರಿಸಲು ಅಂದಿನ ದಿವಾನರಾಗಿದ್ದ ವಿಶ್ವೇಸ್ವರಯ್ಯನವರನ್ನು ಕೇಳಿಕೊಂಡಾಗ  ಅವರೂ ಸಹಾ ಸಂತೋಷದಿಂದ ಒಪ್ಪಿಕೊಂಡು ಸಜ್ಜನ ರಾಯರು ನಿರ್ಮಿಸಿದ್ದ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲೇ  ಸುಂದರವಾದ ಮತ್ತು ಅತ್ಯಂತ ವಿಶಾಲವಾದ ವಸತಿಯೋಗ್ಯಬಡಾವಣೆಯ ರೂಫುರೇಷೆಗಳನ್ನು ತಯಾರಿಕೊಟ್ಟು 1922ರ ನವೆಂಬರ್ ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾದ ಆ ಬಡವಣೆಗೆ ಅದರ ಯೋಜನೆಯನ್ನು ಮಾಡಿಕೊಟ್ಟ ವಿಶ್ವೇಶ್ವರಯ್ಯನವರ ನೆನಪಿನಾರ್ಥವಾಗಿ ಆ ಪ್ರದೇಶಕ್ಕೆ ವಿಶ್ವೇಶ್ವರ ಪುರ ಎಂದು ಹೆಸರಿಸಲಾಯಿತು.

sajjan_choultryಹಾಗೆ ವಸತಿಯೋಗ್ಯ ಬಡಾವಣೆ ನಿರ್ಮಾಣಗೊಂಡ ನಂತರ  ಆಸ್ತಿಕ ಮಹಾಶಯರ ಅನುಕೂಲಕ್ಕೆಂದು ಸಜ್ಜನ್ ರಾಯರು ತಾವೇ ಕಟ್ಟಿಸಿದ್ದ್ದ ಶ್ರೀ  ಸುಬ್ರಹ್ಮಣ್ಯೇಶ್ವರ ದೇವಾಲಯ ಪಕ್ಕದಲ್ಲೇ ಶುಭಕಾರ್ಯಗಳು ನಿರಂತವಾಗಿ ನಡೆಯುವಂತೆ ಛತ್ರವನ್ನೂ ಸಹಾ  ಕಟ್ಟಿಸಿಕೊಟ್ಟರು.

sajjan_rao_Circleನೋಡ ನೋಡುತ್ತಿದ್ದಂತೆಯೇ ಅವರು ಕಟ್ಟಿಸಿದ ದೇವಾಲಯಕ್ಕೆ ಮತ್ತು ಛತ್ರಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದನ್ನು ಗಮನಿಸಿ ಜನರ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತಹ ವೃತ್ತವೊಂದರ  ಅವಶ್ಯಕತೆಯನ್ನು ಮನಗೊಂಡ ಅಂದಿನ ನಿಗಮವು ಅದನ್ನು  ರಾಯರ ಬಳಿ ಪ್ರಸ್ತಾಪಿಸಿದ ಕೂಡಲೇ, ಅದೇ ದೇವಾಲಯದ ಮುಂದೆ ವಿಶಾಲವಾದ ವೃತವೊಂದನ್ನು ಕಟ್ಟಿಸಿಕೊಟ್ಟಿದ್ದರ ಸವಿನೆನಪಿಗಾಗಿ ಅದಕ್ಕೆ  ಸಜ್ಜನ್ ರಾವ್ ಸರ್ಕಲ್ ಎಂದೇ ನಾಮಕರಣ ಮಾಡಲಾಗಿ, ಇಂದಿಗೂ ಸಹಾ ಬೆಂಗಳೂರಿನಲ್ಲಿ  ಅಳಿದುಳಿದಿರುವ ವಿಶಾಲ ವೃತ್ತಗಳಲ್ಲಿ ಇದೂ ಸಹಾ ಒಂದಾಗಿರುವುದು ಗಮನಾರ್ಹವಾಗಿದೆ.

vali_vilasa_hospitalನಂತರದ ದಿನಗಳಲ್ಲಿ ಜನರ ಅನುಕೂಲಕ್ಕೆ ಆಸ್ಪತೆಯ ಅವಶ್ಯಕತೆಯನ್ನು ಮನಗೊಂಡ ರಾಯರು ಅದೇ  ಸಜ್ಜನ್ ರಾವ್ ಸರ್ಕಲ್ ಸಮೀಪದಲ್ಲೇ ದವಾಖಾನೆಯನ್ನೂ ಸಹಾ ನಿರ್ಮಿಸಿ  ಅದನ್ನು ಪಾಲಿಕೆಗೆ ಕೊಡುಗೆಯಾಗಿ ನೀಡಿದರು.  ಇಷ್ಟೇ ಅಲ್ಲದೇ, ಸರ್ ಎಂ ವಿಶ್ವೇಶ್ವರಯ್ಯನವರ ನಂತರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಲ್ ಅವರು  ಎಲೆ ಮರಿಮಲ್ಲಪ್ಪ ಶೆಟ್ಟರು ಇಂದಿನ ನೃಪತುಂಗ ರಸ್ತೆಯಲ್ಲಿ ಕಟ್ಟಿಸಿದ್ದ ಹೆರಿಗೆ ಆಸ್ಪತೆಯನ್ನು ಸಜ್ಜನ್ ರಾವ್ ಸರ್ಕಲ್ ಸಮೀಪವೇ ಇದ್ದ  ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಸಲುವಾಗಿ ಸಜ್ಜನ ರಾಯರನ್ನು ಸಂಪರ್ಕಿಸಿದಾಗ, ಮುಕ್ತ ಮನಸ್ಸಿನಿಂದ ಅಂದಿನ ಕಾಲಕ್ಕೇ 50,000 ರೂ.ಗಳನ್ನು ದಾನವಾಗಿ ನೀಡಿದ ಪರಿಣಾಮವಾಗಿ  ಇಂದಿಗೂ ಸಹಾ  ಮಹಿಳಾ ಮತ್ತು ಮಕ್ಕಳ ವಾಣಿವಿಲಾಸ ಆಸ್ಪತೆಯಯಲ್ಲಿರುವ ಹೆರಿಗೆ ಬ್ಲಾಕ್‌ಗೆ  ಎಲೆ ಮರಿಮಲ್ಲಪ್ಪ ಶೆಟ್ಟರು ಮತ್ತು ಸಜ್ಜನ್ ರಾವ್ ಅವರ ಹೆಸರಿಸಲಾಗಿದೆ.

sajjan2ರಾಯರು  ತಮ್ಮ ಸಮಾಜ ಸೇವೆಗಳು ನಿತಂತವಾಗಿ ಮುಂದುವರೆದುಕೊಂಡು ಹೋಗವ ಸಲುವಾಗಿ ತಮ್ಮ ಹೆಸರಿನಲ್ಲೇ  ಟ್ರಸ್ಟ್ ಅನ್ನು ಪ್ರಾರಂಭಿಸಿ ಆ  ಟ್ರಸ್ಟಿನ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಲ್ಲದೇ ಅಂದಿನ ಕಾಲಕ್ಕೇ ವಿಕಲಚೇತನರಿಗಾಗಿ ವಿಶೇಷ ಶಾಲೆಯನ್ನೂ ಸಹಾ ಆರಂಭಿಸಿದ್ದರು. ಸಜ್ಜನ ರಾಯರ ಈ ರೀತಿಯ ಹತ್ತು ಹಲವಾರು ಸಮಾಜಮುಖೀ  ಕೊಡುಗೆಗಳನ್ನು ಗುರುತಿಸಿದ ಅಂದಿನ ಮೈಸೂರು ರಾಜರು ಅವರಿಗೆ ಧರ್ಮ ಪ್ರಕಾಶ ಎಂಬ ಬಿರುದನ್ನು ನೀಡಿ ಗೌರವಿಸಿದ್ದಲ್ಲದೇ ವಿವಿ ಪುರಂನಲ್ಲಿರುವ ರಸ್ತೆಗೆ ಸಜ್ಜನ್ ರಾವ್ ರಸ್ತೆ ಎಂದು ಹೆಸರಿಸಲಾಗಿದೆ.

sajjan_Rao_samadiಇಷ್ಟೆಲ್ಲಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀ ಸಜ್ಜನ್ ರಾಯರು 1942 ವಯೋಸಜಯವಾಗಿ ನಿಧನರಾದಾಗ  ಅಕ್ಷರಶಃ ಬೆಂಗಳೂರು ನಗರ ಅನಾಥವಾಯಿತೆಂದು ಲಕ್ಷಾಂತರ ಜನರು ಕಣ್ಣೀರು ಹಾಕಿದರು.  ಆವರ ನೆನಪು ಸಹಾ ಕಾಲವೂ ಇರಬೇಕೆಂದು ಇಂದಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದ ಎದುರಿನಲ್ಲೇ ಅವರ ಸ್ವಂತಕ್ಕೆ ಸೇರಿದ ಜಾಗದಲ್ಲಿ  ಅವರ ಸಮಾಧಿಯನ್ನು ಮಾಡಲಾಯಿತು. ಬೆಂಗಳೂರಿನ ಅಭಿವೃದ್ಧಿಗಾಗಿಯೇ ತಮ್ಮ ಸಮಸ್ಥ ಆಸ್ತಿಯನ್ನು ಮುಡಿಪಾಗಿಟ್ಟಿದ್ದ ರಾಯರ ಸಮಾದಿ ದುರಾದೃಷ್ಟವಷಾತ್ ಇಂದು ಸರಿಯಾದ ನಿರ್ವಹಣೆ ಇಲ್ಲದೇ, ಸುತ್ತಮುತ್ತಲಿನ ಜನರು ಹಾಕುವ ತ್ಯಾಜ್ಯ ಮತ್ತು  ಅದರಿಂದ ಬೆಳೆದ ಕಳೆಗಳಿಂದ ಆವೃತವಾಗಿದ್ದು ಆದನ್ನು ನೋಡಲು ಅತ್ಯಂತ ವಿಷಾಧನೀಯವಾಗಿದೆ.

tindiಬೆಂಗಳೂರಿನ ಇಂದಿನ ಯುವ ಜನಾಂಗಕ್ಕೆ ಸಜ್ಜನ್ ರಾವ್ ಸರ್ಕಲ್ ಎಲ್ಲಿದೆ ಎಂದು ಕೇಳಿದರೆ ಕಕ್ಕಾಬಿಕ್ಕಿಯಾಗುತ್ತಾರೆ.  ಆದರೆ ಅದೇ ಯುವಕರಿಗೆ ವಿ ಬಿ ಬೇಕರಿ ಮತ್ತು ಫುಡ್ ಸ್ಟ್ರೀಟ್ ಗೊತ್ತಾ? ಎಂದು ಕೇಳಿದ ಕೂಡಲೇ ಥಟ್ ಎಂದು ಹಾಂ!! ವಿ.ವಿ.ಪುರಂ ನಲ್ಲಿದೆ. ನಾವು ಅಲ್ಲಿಗೆ ಹೋಗಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅಂದು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯಗಳ ಸಂಕೀರ್ಣ ಮತ್ತು ವಿವಿಧ ಕಲ್ಯಾಣ ಮಂಟಪಗಳಿಗೆ ಪ್ರಖ್ಯಾತವಾಗಿದ್ದ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿ.ವಿ.ಪುರಂ ಬಡಾವಣೆಯ ಸಜ್ಜನ್ ರಾವ್ ಸರ್ಕಲ್ ಇಂದು ದಿಢೀರ್ ಆಹಾರಕ್ಕೆ ವಿಶ್ವವಿಖ್ಯಾತವಾಗಿದೆ.

VB_bakeryಹಾಸನದ ಮೂಲದ ಶ್ರೀ H S ತಿರುಮಲಾಚಾರ್ ಅವರು 1898 ರಲ್ಲಿ  ಬೆಂಗಳೂರು ಬೇಕರಿ (B.B)ಯನ್ನು ಆರಂಭಿಸಿ ಅದು ಬೆಂಗಳೂರಿನ ಮೊದಲ ಅಯ್ಯಂಗಾರ್ ಬೇಕರಿ ಎಂದೇ ಪ್ರಸಿದ್ಧಿಯನ್ನು ಪಡೆದು ನಂತರ ಅದೇ ಬೇಕರಿ 1953ರಲ್ಲಿ ಇದೇ ಸಜ್ಜನ್ ರಾವ್ ಸರ್ಕಲ್ಲಿನ ಮತ್ತೊಂದು ಬದಿಗೆ ಸ್ಥಳಾಂತರ ಗೊಂಡ ನಂತರ ವಿ.ಬಿ. ಬೇಕರಿ (ವಿಶ್ವೇಶ್ವರಪುರ ಬೇಕರಿ) ಎಂದೇ ಪ್ರಸಿದ್ಧವಾಗಿದ್ದು  ಇಂದಿಗೂ ಸಹಾ ಸ್ವಚ್ಛ ಪರಿಸರದಲ್ಲಿರುವ ಒಳ್ಳೆಯ ಹದವಾದ ಬಿಸಿ-ಬಿಸಿ ಕೇಕ್, ಬನ್, ಬ್ರೆಡ್, ಹುರಿಗಾಳು, ರಸ್ಕ್, ಬೆಣ್ಣೆ ಬಿಸ್ಕತ್ ಗಳು ದೊರಕುವ ಶುದ್ಧ ಅಯ್ಯಂಗಾರ್ ಬೇಕರಿಗಳಲ್ಲಿ ಒಂದಾಗಿದೆ.  ಅಂದಿನಿಂದಲೂ ಇಂದಿನ ವರೆಗೂ ಬೆಂಗಳೂರಿನ  ಉಳಿದೆಲ್ಲಾ ಬೇಕರಿಗಳಿಗಿಂತಾ ಸ್ವಾದಿಷ್ಟತೆಗೆ ಮತ್ತು  ಉತ್ತಮ ಗುಣಮಟ್ಟಕ್ಕೆ ವಿ.ಬಿ.ಬೇಕರಿ ಹೆಸರುವಾಸಿಯಾಗಿದ್ದು ಇಲ್ಲಿ ತಯಾರಿಸಿದ ಬೇಕರಿ ತಿಂಡಿ ತಿನಿಸುಗಳು ಬೆಂಗಳೂರಿನ ಅನೇಕ ಬಡಾವಣೆಗಲ್ಲಿ ಲಭ್ಯವಿದೆ. ಈ ವಿಬಿ ಬೇಕರಿಯಲ್ಲಿ ಸಿರುವ  ಬಿಸಿ-ಬಿಸಿ ಖಾರ ಬನ್ನು ಮತ್ತು ಅವರದ್ದೇ ವೈಶಿಷ್ಟ್ಯವಾದ ಖಾರ ಬನ್ ಕಾಂಗ್ರೆಸ್ (KBC) ಅಲ್ಲದೆ ಬೆಣ್ಣೆ ಮಿಶ್ರಿತ ಸಿಹಿ ಬನ್,  ಪಲ್ಯದ ಬನ್, ಬೆಣ್ಣೆ ಗುಲ್ಕತ್ ಅಲ್ಲದೇ, ಭಾನುವಾರದಂದು ವಿಶೇಷವಾಗಿ ತಯಾರಿಸಲಾಗುವ ಬೂದುಕುಂಬಳಕಾಯಿ ಹಲ್ವಾ (ದಂರೋಟ್) ಬಹಳ ವಿಶೇಷವಾಗಿದೆ. ಕೇವಲ ಬೇಕರಿ ಉತ್ಪನ್ನಗಳೂ ಮತ್ತು ಸಿಹಿ ತಿಂಡಿಗಳಲ್ಲದೇ, ಐಸ್ ಕ್ರೀಂಗಳಿಗೂ ಸಹಾ ಪ್ರಸಿದ್ಧಿಯನ್ನು ಪಡೆದಿದೆ.

food_Streetಇದೇ ವಿಬಿ ಬೇಕರಿಯ ಮುಂದಿನ ರಸ್ತೆಯು ಎಲ್ಲರ ಬಾಯಲ್ಲಿ ನೀರೂರಿಸುವ ದಕ್ಷಿಣ/ಉತ್ತರ ಭಾರತೀಯ ಬಗೆ ಬಗೆಯ ಭಕ್ಷ್ಯಗಳನ್ನು ಮಾಡುವ ರಸ್ತೆಯ ಬದಿಯ ಅಂಗಡಿಗಳ ಉದ್ದನೆಯ ಸಾಲಿದ್ದು  ಬೆಂಗಳೂರಿನ ತಿಂಡಿ ಬೀದಿ (ಫುಡ್ ಸ್ಟ್ರೀಟ್) ಎಂದೇ ಹೆಸರು ವಾಸಿಯಾಗಿದೆ. ಇಲ್ಲಿ  ವಿವಿಧ ಬಗೆ ಬಗೆಯ ದಿಢೀರ್ ತಿಂಡಿ ತೀರ್ಥಗಳಿಗೆ ಅತ್ಯಂತ ಹೆಸರುವಾಸಿಯಾಗಿದ್ದು, ಕೈ ಗೆಟುಕುವ ಬೆಲೆಯಲ್ಲಿ, ಶುಚಿ ರುಚಿಯಾದ ನಮ್ಮ ಕಣ್ಣ ಮುಂದೆಯೇ ಶುದ್ಧ ಹಾಲು, ಮೊಸರು,ಬೆಣ್ಣೆ ಮತ್ತು ತುಪ್ಪದಿಂದ ತಯಾರಾಗುವ   ಬಗೆ ಬಗೆಯ ಬಿಸಿ ಬಿಸಿ ದೋಸೆ, ಇಡ್ಲಿ, ಬೊಂಡ ಬಜ್ಜಿ, ವಿವಿಧ  ಅನ್ನದ ಬಾತ್ ಮುಂತಾದ ನೂರಾರು ಖಾದ್ಯಗಳನ್ನು ಬಡವ ಬಲ್ಲಿದ್ದ ಎಂಬ ಯಾವುದೇ ಬೇಧಭಾವವಿಲ್ಲದೇ, ರಸ್ತೆಯ ಮೇಲೆಯೇ ತಿನ್ನಲು ಕೇವಲ ಬೆಂಗಳೂರಿಗರಲ್ಲದೇ, ದೇಶ ವಿದೇಶಗಳಿಂದ ಬರುತ್ತಾರೆ ಎಂದರೆ ಇದರ ಖ್ಯಾತಿಯನ್ನು ಊಹಿಸಬಹುದಾಗಿದೆ.

food_Steet2ಪ್ರತೀ ವರ್ಷ  ಅವರೇ ಕಾಳಿನ ಕಾಲವಾದ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ವಾಸವಿ ಕಾಂಡಿಮೆಂಟ್ಸ್ ಅವರು  ಇಲ್ಲಿ ಸುಮಾರು ಒಂದೆರಡು ವಾರಗಳ ಕಾಲ ನಡೆಸುವ ಅವರೇಕಾಳಿನಿಂದ ತಯಾರಿಸಲಾಗುವ ವಿವಿಧ ಖಾದ್ಯಗಳ ಸವಿಯನ್ನು ಸವಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಜನದಟ್ಟಣೆಯನ್ನು ತಡೆಯಲಾಗದೇ ಇತ್ತೀಚಿನ ಕೆಲವರ್ಷಗಳಿಂದ ವಾಸವಿ ಕಾಂಡಿಮೆಂಟ್ಸ್ ಅವರು ಈ ರೀತಿಯ ಅವರೇ ಮೇಳವನ್ನು ನಗರದ ವಿವಿಧ ಬಡಾವಣೆಗಳಲ್ಲಿ ನಡೆಸುತ್ತಿದ್ದಾರೆ,

ಸಜ್ಜನರಾವ್ ಸರ್ಕಲ್ ಹತ್ತಿರದಲ್ಲೇ ಇರುವ ವಾಲ್ಮೀಕಾಶ್ರಮದಲ್ಲಿ ಇಂದಿಗೂ ಸಹಾ ಪ್ರತಿದಿನವೂ ಹರಿಕಥೆ ನಡೆಯುವುದು ವಿಶೇಷವಾಗಿದೆ. ಸಜ್ಜನ್ ರಾವ್ ಸರ್ಕಲ್ ಬಳಿಯೇ ಅತ್ಯಂತ ಪುರಾತನವಾದ ಪೋಸ್ಟ್ ಆಫೀಸ್, ಆರ್ಯ ಸಮಾಜ, ವೆಂಕಟರಮಣಸ್ವಾಮಿ, ದೇವಾಲಯ, ಸತ್ಯನಾರಾಯಣ ದೇವಾಲಯವಲ್ಲದೇ ಅಲ್ಲಿಂದ ಕೆಲವೇ ಹೆಜ್ಜೆಗಳಷ್ಟು ಅಕ್ಕ ಪಕ್ಕ  ನಡೆದುಕೊಂಡು  ಹೋದಲ್ಲಿ ನ್ಯಾಷನಲ್ ಕಾಲೇಜ್, ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಗಾಯನ ಸಮಾಜ, ಕೃಷ್ಣರಾವ್ ಪಾರ್ಕ್, ಬೆಂಗಳೂರು ಮೆಡಿಕಲ್ ಕಾಲೇಜ್, ಲಾಲ್ ಬಾಗ್, ರಾಷ್ಟ್ರೀಯ ವಿದ್ಯಾಲಯ,ಮಹಾರಾಷ್ಟ್ರ ಮಹಿಳಾ ವಿದ್ಯಾಲಯ, ಚಿಕ್ಕಮಾವಳ್ಳಿ, ಮಿನರ್ವಾ ಸರ್ಕಲ್, ಒಕ್ಕಲಿಗರ ಸಂಘ ಹಾಸ್ಟೆಲ್, ಮಾಧ್ವಸಂಘ ಇನ್ನು ಮುಂತಾದ ಅತ್ಯಂತ ಹಳೆಯದ ಸಂಘಸಂಸ್ಥೆಗಳಿವೆ.

subramnya_templeಸಜ್ಜನ್ ರಾವ್ ಸರ್ಕಲ್ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ ಇನ್ನೇಕೇ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ವಿವಿ ಪುರದ ಸಜ್ಜನ್ ರಾವ್ ಸರ್ಕಲ್ಲಿಗೆ ಹೋಗಿ ಅಲ್ಲಿನ ಸುಬ್ರಹ್ಮಣ್ಯೇಶ್ವರ ದೇವಾಲಯದ ಎಲ್ಲಾ ದೇವರುಗಳ ದರ್ಶನ ಪಡೆದು,  ಪ್ರಾತಃ ಸ್ಮರಣೀಯರಾದ ಜನೋಪಕಾರಿ ಶ್ರೀ ಸಜ್ಜನ್ ರಾವ್ ಮತ್ತು ಸರ್, ಎಂ. ವಿಶ್ವೇಶ್ವರಯ್ಯನವರ ಸೇವೆಯನ್ನು ನೆನೆಯುತ್ತಲೇ, ವಿ.ಬಿ. ಬೇಕರಿ ಮತ್ತು ಫುಡ್ ಸ್ಟ್ರೀಟ್ ನ ಖಾದ್ಯಗಳನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

author single

L Ramprasad

Managing Director

comments

No Reviews