ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಗ್ಯಾಂಗ್ ಗೆ ಇನ್ನೂ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ
2024-09-09 09:01:51
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಸೋಮವಾರ ಮಧ್ಯಾಹ್ನ 1:15ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ 17 ಆರೋಪಿಗಳು ಕೂಡ ವಿಚಾರಣೆ ಹಾಜರಾಗಿದ್ದರು. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್‌ಗೆ ಎ-2 ಆರೋಪಿ ದರ್ಶನ್ ಬಂದಿದ್ದರು.
ಪ್ರಕರಣದ ಹಾರ್ಡ್ಡಿಸ್ಕ್, ಪೆನ್‌ಡ್ರೈವ್ ಎಲ್ಲವನ್ನೂ ಕೋರ್ಟ್‌ಗೆ ಎಸ್‌ಪಿಸಿ ಪ್ರಸನ್ನಕುಮಾರ್ ಸಲ್ಲಿಸಿದರು. ಡಿಜಿಟಲ್ ಎವಿಡೆನ್ಸ್ ಇನ್ನೆರಡು ವಾರದಲ್ಲಿ ಕೊಡುವುದಾಗಿ ತಿಳಿಸಿದರು.
ವಿಚಾರಣೆ ವೇಳೆ, ಜೈಲಿಗೆ ಚಾರ್ಜ್‌ಶೀಟ್ ಕಳಿಸುತ್ತೇವೆ ಎಂದು ಎಸ್‌ಪಿಸಿ ಪ್ರಸನ್ನಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ನ್ಯಾಯಾಧೀಶರು ಆರೋಪಿಗಳ ಬಳಿಯೇ ವಕೀಲರ ಹೆಸರು ಕೇಳಿದರು. ವಕೀಲ ಸಿ.ವಿ.ನಾಗೇಶ್ ಅವರು ನನ್ನ ಪರ ಹಾಜರಾಗ್ತಾ ಇದ್ದಾರೆ ಎಂದು ದರ್ಶನ್ ತಿಳಿಸಿದರು. ಉಳಿದ ಆರೋಪಿಗಳು ತಮ್ಮ ಪರ ವಾದ ಮಂಡಿಸುವ ವಕೀಲರ ಹೆಸರು ಹೇಳಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮತ್ತೆ 3 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿತು.
comments
Log in to write reviews