ಸೌಜನ್ಯಾ ಪರ ಹೋರಾಟಕ್ಕೆ ಮತ್ತೆ ನಿರಾಸೆ ; ಮರು ತನಿಖೆ ಅರ್ಜಿ ಹೈಕೋರ್ಟಿನಲ್ಲಿ ವಜಾ

ಸೌಜನ್ಯಾ ಪರ ಹೋರಾಟಕ್ಕೆ ಮತ್ತೆ ನಿರಾಸೆ ; ಮರು ತನಿಖೆ ಅರ್ಜಿ ಹೈಕೋರ್ಟಿನಲ್ಲಿ ವಜಾ

2024-08-30 11:04:50

ಮಂಗಳೂರು, ಆಗಸ್ಟ್‌ 30:  ರಾಜ್ಯದಲ್ಲಿ ಸಂಚಲನ ಎಬ್ಬಿಸಿದ್ದ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ಸೇರಿದಂತೆ ಸಲ್ಲಿಸಲಾಗಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. 

ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದಿದ್ದ ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಕಡೆಯಿಂದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಲಾಗಿದೆ. ಇದಲ್ಲದೆ, ನೈಜ ಆರೋಪಿಯನ್ನು ಪತ್ತೆ ಮಾಡಲು ಮರು ತನಿಖೆಗೆ ಆದೇಶಿಸಬೇಕೆಂದು ಸೌಜನ್ಯಾ ತಾಯಿ ಕುಸುಮಾವತಿ ಮತ್ತು ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಇದೇ ವೇಳೆ, ಆರೋಪಿಯೆಂದು ಗುರುತಿಸಿದ್ದ ಸಂತೋಷ್ ರಾವ್ ನಿರ್ದೋಷಿಯೆಂದು ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದೇ ವೇಳೆ, ತನ್ನನ್ನು ನಿರಪರಾಧಿ ಆಗಿದ್ದರೂ ಎಂಟು ವರ್ಷಗಳ ಕಾಲ ಜೈಲಿನಲ್ಲಿಟ್ಟಿದ್ದಕ್ಕೆ ಪ್ರತಿಯಾಗಿ ಪರಿಹಾರ ನೀಡಬೇಕೆಂದು ಸಂತೋಷ್ ರಾವ್ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. 

ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರಿದ್ದ ದ್ವಿಸದಸ್ಯ ಪೀಠವು ಜುಲೈ 4ರಂದು ವಿಚಾರಣೆ ಪೂರ್ತಿಗೊಳಿಸಿ ಆದೇಶ ಕಾಯ್ದಿರಿಸಿತ್ತು. ಆಗಸ್ಟ್‌ 30ರ ಶುಕ್ರವಾರ ಮೂರೂ ಅರ್ಜಿಗಳನ್ನ ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಮೂಲಕ ಸೌಜನ್ಯಾ ಪರ ಹೋರಾಟಕ್ಕೆ ತೀವ್ರ ನಿರಾಸೆ ಮತ್ತು ಹಿನ್ನಡೆಯಾಗಿದೆ. 

2012ರ ಅ.9ರಂದು ಪಿಯುಸಿ ವಿದ್ಯಾರ್ಥಿಬಿ ಸೌಜನ್ಯಾಳನ್ನ ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಸಂತೋಷ್‌ ರಾವ್‌ ಎಂಬಾತನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧಿಸಿ ಸಾರ್ವಜನಿಕರಿಂದ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿದ್ದರಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್‌ ರಾವ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಸೆಷನ್ಸ್‌ ಕೋರ್ಟ್ ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಸಂತೋಷ್‌ ರಾವ್‌ ನನ್ನ ಖುಲಾಸೆಗೊಳಿಸಿ 2023ರ ಜೂ.16ರಂದು ಆದೇಶ ಮಾಡಿತ್ತು. 

ಆನಂತರ, ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸೌಜನ್ಯಾ ಪರವಾಗಿ ಪ್ರತಿಭಟನೆ, ಅಭಿಯಾನ ನಡೆದಿತ್ತು. ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದಾಗಲೇ ಮರು ತನಿಖೆ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.

author single

L Ramprasad

Managing Director

comments

No Reviews