ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿ ಕೊಟ್ಟ ಸಿಐಡಿ ಟೀಂ
2024-08-17 10:05:48
ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸದ್ಯ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಯಾದಗಿರಿಗೆ ಭೇಟಿ ನೀಡಿದ್ದು, ಪರಶುರಾಮ ಸಾವಿನ ಬಗ್ಗೆಯೇ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ನಗರದ ಎಸ್ಪಿ ಕಚೇರಿ ಹಿಂಭಾಗದ ಪೊಲೀಸ್ ವಸತಿ ಗೃಹದಲ್ಲಿರುವ ಪರಶುರಾಮ ಮನೆಯನ್ನು ಪರಿಶೀಲನೆ ಮಾಡಿದ್ದಾರೆ.
ಪರಶುರಾಮ ಮಾವ ವೆಂಕಟಸ್ವಾಮಿಯವರಿಂದ ಮಾಹಿತಿ ಪಡೆದ ಸಿಐಡಿ
ಪರಶುರಾಮ ಮನೆಯ ಯಾವ ಕೊಣೆಯಲ್ಲಿ ಮೃತಪಟ್ಟಿದ್ದ ಸೇರಿ ಅಗತ್ಯ ಮಾಹಿತಿಯನ್ನು ಮಾವ ವೆಂಕಟಸ್ವಾಮಿಯಿಂದ ಪಡೆದುಕೊಂಡಿದ್ದಾರೆ. ಮನೆಯ ಎಲ್ಲಾ ಕೋಣೆ ಪರಿಶೀಲನೆ ಮಾಡಿದ್ದಾರೆ. ನಂತರ ಎಸ್ಪಿ ಕಚೇರಿಗೆ ತೆರಳಿ ಪರಿಶೀಲಿಸಿದ್ದಾರೆ. ಸಾಯುವ ಮುನ್ನ ಪರಶುರಾಮ ಯಾರನ್ನು ಭೇಟಿ ಮಾಡಿದ್ದರು ಎಂಬ ಹಲವು ವಿಚಾರಗಳ ಬಗ್ಗೆ ಸಿಐಡಿ ತನಿಖಾಧಿಕಾರಿಗಳು ಹಾಗೂ ಯಾದಗಿರಿ ಪೊಲೀಸ್ ಅಧಿಕಾರಿಗಳಿಂದ ಎಡಿಜಿಪಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಪರಶುರಾಮ ಮಾವ ವೆಂಕಟಸ್ವಾಮಿ, ಬೆಳಗ್ಗೆ ಸಿಐಡಿ ಅಧಿಕಾರಿಗಳು ಫೋನ್ ಮಾಡಿ ಬರಲು ಹೇಳಿದ್ದರು. ಅವರು ಏನು ಕೇಳಿದ್ದಾರೆ ಎಲ್ಲಾ ಹೇಳಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ಮಾಡಿದ್ದರು.
ಪಿಎಸ್‌ಐ ನಿಗೂಢ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪಣ್ಣಗೌಡ ಕಾರಣ ಅಂತಾ ಪಿಎಸ್‌ಐ ಪತ್ನಿ ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆ ಆಗಿರುವ ತಂದೆ ಮಗ ಪತ್ತೆಯಾಗಿಲ್ಲ.
comments
Log in to write reviews