ಮುಡಾ ಹಗರಣದ ಪ್ರಾಸಿಕ್ಯೂಶನ್: ಶಾಸಕಾಂಗ ಸಭೆ ಕರೆದ ಸಿಎಂ
2024-08-18 12:58:20
2013 ರಲ್ಲಿ ನಡೆದಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ 14 ಸೈಟ್ ಗಳ ಕುರಿತು ರಾಜ್ಯಪಾಲರು ಕೊನೆಗೂ ಬಹಳ ದಿನಗಳ ನಂತರ ಪ್ರಾಸಿಕ್ಯೂಷನ್ ನೀಡಿದ್ದಾರೆ. ಇದರಿಂದ ಮುಡಾದಲ್ಲಿ ಸೈಟ್ ಪಡೆದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಆದರೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ದ ಇಡೀ ಕೈ ಸಂಪುಟವೇ ತಿರುಗಿಬಿದ್ದಿದೆ. ರಾಜ್ಯಪಾಲರು ಕೇಂದ್ರಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಹೇಳಿದ್ದನ್ನೇ ಮಾಡುತ್ತಿದ್ದಾರೆ ಎಂದು ನೇರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ದ ಸಚಿವರು ಕಿಡಿ ಕಾರುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಬುಧವಾರ ಆಗಸ್ಟ್ 21 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಈ ಶಾಸಕಾಂಗ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ 135 ಶಾಸಕರೇ ಬಲ. ಹೀಗಾಗಿ ಶಾಸಕರ ಸಭೆ ಕರೆದು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ರಾಜ್ಯಪಾಲರ ವಿರುದ್ಧ ಶಾಸಕಾಂಗ ಸಭೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಇಡೀ ಪ್ರಕರಣದ ಬೆಳವಣಿಗೆ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ. ಜೊತೆಗೆ ಮುಂದಿನ ಹೋರಾಟಗಳಿಗೆ ಶಾಸಕರ ಸಹಕಾರ ಕೋರಲಿದ್ದಾರೆ.
ರಾಜ್ಯಪಾಲರು ಆದೇಶಿಸಿರೋ ಇದೊಂದು ಪ್ರಾಸಿಕ್ಯೂಷನ್, ನೇರವಾಗಿ ರಾಜ್ಯಸರ್ಕಾರ ಹಾಗೂ ಕೇಂದ್ರಸರ್ಕಾರ ನಡುವೆ ಮತ್ತೊಂದು ಹೋರಾಟಕ್ಕೆ ಕಾರಣವಾಗಿದೆ. ಏಕೆಂದರೆ ಮುಂದೆ ನಡೆಯುವ ರಾಜಕೀಯ ವಾಗ್ಯುದ್ಧ ಎರಡು ರೀತಿಯಾಗಿ ಬದಲಾಗುತ್ತಿದೆ. ಒಂದು ಕಾನೂನು ಹೋರಾಟ. ಮತ್ತೊಂದು ರಾಜಕೀಯ ಹೋರಾಟ. ಈ ಎರಡೂ ಹೋರಾಟಗಳು ಬೇರೇ ನಡೆದರೂ, ರಾಜ್ಯದ ರಾಜಕೀಯ ಧಗಧಗಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ದ ಆದೇಶಿಸಿರುವ ಪ್ರಾಸಿಕ್ಯೂಷನ್.
ಈ ವರ್ಷ ಮಳೆ,ಬೆಳೆ ಚೆನ್ನಾಗಿ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಟಿ.ಬಿ ಡ್ಯಾಂನ ಕ್ರಸ್ಟ್ ಗೇಟ್ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆಯು ಬದಲಿ ಗೇಟ್ ಹಾಕಲು ಯಶಸ್ವಿಯಾಗಿ ರಾಜ್ಯದ 8 ಜಿಲ್ಲೆಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಇದನ್ನು ಸೆಲೆಬ್ರೇಟ್ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಆಗದಂತೆ ಈಗ ಮುಡಾ ಸೈಟ್ ಹಗರಣದ ತನಿಖೆಗೆ ಪ್ರಾಸಿಕ್ಯೂಶನ್ ಸಂಕಷ್ಟ ಎದುರಾಗಿದೆ. ಕಾನೂನು ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಪ್ರಾಸಿಕ್ಯೂಶನ್ ನಿಂದ ತಪ್ಪಿಸಿಕೊಳ್ಳಲು ಸದ್ಯ ಅಸಾಧ್ಯ. ಸುಪ್ರೀಂಕೋರ್ಟ್ ಮೇಲ್ಮನವಿ ಒಂದೇ ಸಿಎಂ ಸಿದ್ದರಾಮಯ್ಯನವರಿಗೆ ಇರುವ ಒಂದೇ ಒಂದು ಅದರ ಅವಕಾಶವಾಗಿದೆ.
comments
Log in to write reviews