ಉತ್ಪಾದನೆ ಕುಸಿತ ಹಿನ್ನೆಲೆ: ಈರುಳ್ಳಿ-ಬೆಳ್ಳುಳ್ಳಿ ಬೆಲೆ ಮತ್ತೆ ಏರಿಕೆ!
2024-09-18 01:42:08
ಬೆಂಗಳೂರು, ಸೆ.18: ರಾಜ್ಯದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಸದ್ಯ ರಾಜ್ಯದ ಹಲವೆಡೆ ಅತಿಯಾದ ಮಳೆಯ ಕಾರಣ ಈರುಳ್ಳಿ ಬೆಳೆ ನೀರುಪಾಲಾಗುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ಮಳೆಯಿಂದಾಗಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ಕಳೆದ ವಾರದಲ್ಲಿ 50 ರೂ. ಇದ್ದ ಈರುಳ್ಳಿ ಬೆಲೆ ಇದೀಗ 60 ರಿಂದ 70 ರೂಪಾಯಿ ಆಗಿದೆ.
ಈರುಳ್ಳಿ ಉತ್ಪಾದನೆ ಭಾರಿ ಕುಸಿತ!
ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಪರಿಣಾಮವಾಗಿ ಈರುಳ್ಳಿ ಪೂರೈಕೆ ಕೂಡ ಕಡಿಮೆಯಾಗಿದೆ. ಸದ್ಯ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ.
ದಸರಾ ವೇಳೆಗೆ ಈರುಳ್ಳಿ ಬೆಲೆ ಮತ್ತಷ್ಟು ದುಬಾರಿ ಸಾಧ್ಯತೆ!
ದಸರಾ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೆ, ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.
ಜೊತೆಗೆ ರಾಜ್ಯದಲ್ಲಿ ಅಧಿಕ ಈರುಳ್ಳಿ ಬೆಳೆಯುವ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಮ ಕಾರಣ ಈರುಳ್ಳಿ ಬೆಳೆ ಹಾಳಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಳೆ ಹೆಚ್ಚಾದ ಪರಿಣಾಮ 1777 ಹೆಕ್ಟೇರ್ ಈರುಳ್ಳಿ ಬೆಳೆ ಹಾಳಾಗಿದೆ. ಮತ್ತೊಂದೆಡೆ ಸದರಿ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಮಳೆ ಬರದ ಕಾರಣ ಈರುಳ್ಳಿ ಬೆಳೆ ಬೆಳೆಯದೆ ಒಣಗಿ ಹೋಗಿವೆ. ಬೆಂಗಳೂರು ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಚಳ್ಳಕೆರೆ ತಾಲೂಕಿನಿಂದ ಆಗುತ್ತಿತ್ತು. ಆದರೆ ಈ ಬಾರಿ ಮಳೆ ಕೈಕೊಟ್ಟ ಕಾರಣ ಮಧ್ಯ ಕರ್ನಾಟಕ ಭಾಗದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಗೆ ಈರುಳ್ಳಿ ಸರಬರಾಜು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ ಚಳ್ಳಕೆರೆ ತಾಲೂಕಿನ ಓರ್ವ ಈರುಳ್ಳಿ ಬೆಳೆಗಾರರು.
ಬೆಳ್ಳುಳ್ಳಿ ಬೆಲೆಯೂ ಏರಿಕೆ!
ಈ ಮಧ್ಯೆ ಬೆಳ್ಳುಳ್ಳಿ ಕೆಜಿಗೆ 400 ರೂ. ಆಗಿದೆ. ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ತರಕಾರಿ ಹಾಗೂ ಈರುಳ್ಳಿಯ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಅಂತ ವ್ಯಾಪಾರಸ್ಥರು ಅಂದಾಜಿಸಿದ್ದಾರೆ.
ಒಟ್ಟಿನಲ್ಲಿ ಮಳೆಯ ಕಾರಣದಿಂದಾಗಿ ಈರುಳ್ಳಿ ಬೆಲೆ ಒಂದೇ ವಾರದಲ್ಲಿ 60 ರಿಂದ 70 ರೂ. ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
comments
Log in to write reviews