ಜಾಮೀನಿಗೆ ಅರ್ಜಿ ಸಲ್ಲಿಸಿದ ಪವಿತ್ರಾಗೌಡ
2024-09-08 01:55:09
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಜೈಲು ಪಾಲಾಗಿರುವ ಪವಿತ್ರಾಗೌಡ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೇ, ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ 3,991 ಆರೋಪ ಪಟ್ಟಿ ಸಲ್ಲಿಸಿದ್ದರು.
ಕಾನೂನಿನ ಪ್ರಕಾರ, ಆರೋಪ ಪಟ್ಟಿ ಸಲ್ಲಿಕೆಯ ನಂತರವಷ್ಟೇ ಆರೋಪಿಗಳು ಜಾಮೀನು ಸಲ್ಲಿಸಲು ಅವಕಾಶವಿದೆ. ಹಾಗಾಗಿ, ಜಾಮೀನು ಸಲ್ಲಿಸಲು ಅತ್ತ ನಟ ದರ್ಶನ್ ಪರವಾಗಿರುವ ವಕೀಲರು ತಯಾರಿ ನಡೆಸಿದ್ದಾರೆ. ಅಸಲಿಗೆ, ಈ ಕೇಸ್ ನ ವಿಚಾರಣೆ ನಡೆಯುತ್ತಿರುವ ಬೆಂಗಳೂರಿನ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನಿಗೆ ಅವರು ಅರ್ಜಿ ಸಲ್ಲಿಸಬಹುದು. ಆದರೆ, ಪವಿತ್ರಾಗೌಡ ಅವರು ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಮುನ್ನವೇ ಹೈಕೋರ್ಟ್ ಮೊರೆ ಹೋಗಿರುವುದು ಕುತೂಹಲ ತಂದಿದೆ.
ಪ್ರಕರಣದ ಎ-1 ಆರೋಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ-1 ಆರೋಪಿಯಾಗಿದ್ದಾರೆ. ಇತ್ತೀಚೆಗೆ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ರೇಣುಕಾಸ್ವಾಮಿಯವರ ಕೊಲೆಗೆ ಮೂಲ ಕಾರಣವೇ ಇವರು ಎಂದು ಉಲ್ಲೇಖಿಸಲಾಗಿದ್ದು, ಬೆಂಗಳೂರಿನ ಪಟ್ಟಣಗೆರೆಯ ಶೆಟ್ ನಲ್ಲಿ ರೇಣುಕಾಸ್ವಾಮಿಯವರ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸುವಾಗ 'ಕಿಲ್ ಹಿಮ್'' ಎಂದು ನಟ ದರ್ಶನ್ ಗೆ ಹೇಳುವ ಮೂಲಕ ಗ್ಯಾಂಗಿನ ಸದಸ್ಯರಿಗೆ ಪವಿತ್ರಾಗೌಡ ಆತನನ್ನು ಕೊಲ್ಲಲು ಪ್ರೇರೇಪಣೆ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅವರನ್ನೇ ಎ-1 ಆರೋಪಿ ಎಂದು ಘೋಷಿಸಲಾಗಿದೆ.
ದರ್ಶನ್ ಗಲಿಬಿಲಿ?
ಅತ್ತ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ ಕಾರಣಕ್ಕಾಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿರುವ ನಟ ದರ್ಶನ್ ಅವರಿಗೆ ಬಳ್ಳಾರಿಯ ಜೈಲಿನಲ್ಲಿ ಗಲಿಬಿಲಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧ ಬೆಂಗಳೂರು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಾವು ಎ-2 ಆರೋಪಿಯಾಗಿದ್ದು ಅವರೀಗ ಚಾರ್ಚ್ ಶೀಟ್ ಸಲ್ಲಿಕೆಯ ನಂತರ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಆದರೆ, ಅಷ್ಟರಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡುವುದನ್ನು ಸೆರೆ ಹಿಡಿದಿದ್ದ ಡಿ ಗ್ಯಾಂಗ್ ಸದಸ್ಯರ ಮೊಬೈಲ್ ನಲ್ಲಿದ್ದ ಫೋಟೋಗಳು ಮಾಧ್ಯಮಗಳಿಗೆ ಲೀಕ್ ಆಗಿವೆ. ಅದರಲ್ಲೊಂದು ರೇಣುಕಾಸ್ವಾಮಿಯವರು ನನ್ನನ್ನು ಬಿಟ್ಟುಬಿಡಿ ಎಂಬಂತೆ ಬೇಡುತ್ತಿರುವ ಚಿತ್ರವೊಂದು ಭಾರೀ ಸದ್ದು ಮಾಡಿದೆ. ಆ ಫೋಟೋ ಸೇರಿದಂತೆ ಆರೋಪಿಗಳ ಮೊಬೈಲ್ ಗಳಿಂದ ರಿಟ್ರೀವ್ ಆಗಿರುವ ಡಿಲೀಟೆಡ್ ಫೋಟೋಗಳು, ವಿಡಿಯೋಗಳ ಬಗ್ಗೆ ಚಾರ್ಚ್ ಶೀಟ್ ನಲ್ಲಿ ದಾಖಲೆ ಸಮೇತ ಉಲ್ಲೇಖವಾಗಿದ್ದು, ಅವೆಲ್ಲವೂ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿಯಾಗಿದೆ ಎನ್ನಲಾಗಿದೆ. ರಿಟ್ರೀವ್ ಆಗಿರುವ ಫೋಟೋಗಳು, ವಿಡಿಯೋಗಳ ಬಗ್ಗೆ ತಿಳಿದು ನಟ ದರ್ಶನ್ ಅವರು ತೀರಾ ಗೊಂದಲಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.
comments
Log in to write reviews