ದಾವಣಗೆರೆ: ಪಾಪ್ ಕಾರ್ನ್ ಮೆಕ್ಕೆಜೋಳಕ್ಕೆ ಗಿಳಿಗಳ ಕಾಟ!
2024-08-20 10:59:04
ದಾವಣಗೆರೆ, ಆ.20: ರೈತರು ಬೆಳೆದಿರುವ ಬೆಳೆಯನ್ನು ಗಿಳಿಗಳಿಂದ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ತಮಟೆ, ತಟ್ಟೆ ಬಡಿಯುತ್ತಾ ಜಮೀನಿನಲ್ಲಿ ಓಡಾಡುತ್ತಿದ್ದಾರೆ. ಯೆಸ್... ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಬ್ಬಿಗೆರೆ, ಸಂತೇಬೆನ್ನೂರು ಹೋಬಳಿಯಲ್ಲಿ 7 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅದರಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಪಾಪ್ಕಾರ್ನ್ ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗಿದೆ. ಈ ಬಾರಿ ಉತ್ತಮವಾಗಿ ಮಳೆ ಆಗಿದ್ದರಿಂದ ಬೆಳೆ ಕೂಡ ಉತ್ತಮವಾಗಿ ಬೆಳೆದಿದ್ದು, ಈಗ ಕಾಳು ಕಟ್ಟಲು ಆರಂಭವಾಗಿದೆ. ಆದರೆ, ಇದೀಗ ಮೆಕ್ಕೆಜೋಳ ಬೆಳೆಯ ಮೇಲೆ ಗಿಳಿಗಳ ಹಿಂಡು ದಾಳಿ ಮಾಡುತ್ತಿದ್ದು, ಹಾಲು ಕಾಳುಗಳನ್ನು ತಿಂದು ಹಾಕುತ್ತಿರುವುದರಿಂದ ರೈತರು ನಿದ್ದೆಗೆಡುವಂತೆ ಮಾಡಿದೆ.
ರೈತರು ಸಾಲ-ಸೋಲ ಮಾಡಿ ದುಬಾರಿ ಬೆಲೆಯ ಪಾಪ್ಕಾರ್ನ್ ಮೆಕ್ಕೆಜೋಳದ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಂದಿದ್ದರಿಂದ ಬೆಳೆ ಕೂಡ ಹುಲುಸಾಗಿ ಬೆಳೆದಿತ್ತು. ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ಗಿಳಿಗಳ ಹಾವಳಿಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಗಿಳಗಳ ಹಿಂಡು ಪ್ರತಿದಿನ ಮೆಕ್ಕೆಜೋಳದ ಜಮೀನಿಗೆ ಲಗ್ಗೆ ಇಡುತ್ತಿದ್ದು, ರೈತರು ತಮಟೆ ಬಾರಿಸಿ, ತಟ್ಟೆ ಬಾರಿಸಿ, ಮೈಕ್ಗಳ ಮೂಲಕ ಗಿಳಿಗಳನ್ನು ಓಡಿಸಿದರೂ ಪುನಃ ಹಾರಿ ಬಂದು ಕಾಳು ತಿನ್ನುತ್ತಾ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ರೈತರ ಬೇಸರ ವ್ಯಕ್ತಪಡಿಸುತ್ತಾರೆ.
ಒಟ್ಟಿನಲ್ಲಿ ಕಳೆದ ವರ್ಷ ಬರಗಾಲದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಈ ಬಾರಿ ಗಿಳಿಗಳ ದಾಳಿ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಏನೇ ಆಗಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೆಳೆ ಕೆಳೆದುಕೊಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ರೈತರು ಮನವಿ ಮಾಡಿದ್ದಾರೆ.
comments
Log in to write reviews