ಚನ್ನಪಟ್ಟಣ ಎನ್.ಡಿ.ಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ!

ಚನ್ನಪಟ್ಟಣ ಎನ್.ಡಿ.ಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ!

2024-10-25 08:29:36

ರಾಮನಗರ, ಅ.25: ಚನ್ನಪಟ್ಟಣ ಉಪಚುನಾವಣೆ ಅಖಾಡ ಹೈವೋಲ್ಟೇಜ್ ಪಡೆದುಕೊಂಡಿದೆ. ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಸೈನಿಕನ ವಿರುದ್ಧ ಬಿಜೆಪಿ ಜೆಡಿಎಸ್ ದೋಸ್ತಿ ಪಡೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಿದೆ. ಗುರುವಾರ ಭರ್ಜರಿ ಶಕ್ತಿಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿರುವ ಯೋಗೇಶ್ವರ್​ಗೆ​ ತಿರುಗೇಟು ನೀಡುವ ರೀತಿ, ಇಂದು ಚನ್ನಪಟ್ಟಣ ಎನ್​ಡಿಎ ಅಭ್ಯರ್ಥಿ ಆಗಿ ನಿಖಿಲ್ ಕುಮಾರಸ್ವಾಮಿ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೆಂಗಲ್ ಆಂಜನೇಯ ದೇಗುಲದಲ್ಲಿ ನಿಖಿಲ್ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಶೇರ್ವಾ ಸರ್ಕಲ್​ನಿಂದ 1‌ ಕಿಲೋ ಮೀಟರ್​​ ಮೆರವಣಿಗೆ ನಡೆಯಲಿದೆ. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಬಿಜೆಪಿಯ ಹಲವು ನಾಯಕರು ಸಾಥ್ ನೀಡಲಿದ್ದಾರೆ.

ನಿಖಿಲ್ ನಿಮ್ಮ ಮನೆ ಮಗ, ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಹೆಚ್​ಡಿ ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಹೇಳಿದ್ದಾರೆ. ಕಳೆದೆರಡು ಬಾರಿಯಂತೆ ಈ ಸಲವೂ ಚಕ್ರವ್ಯೂಹ ರಚನೆ ಆಗಿದೆ. ಬೇಧಿಸುವ ಶಕ್ತಿ ಕಾರ್ಯಕರ್ತರು ಕೊಡ್ತಾರೆಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್​ ಅಹ್ಮದ್ ಕಣಕ್ಕೆ
ಕಾಂಗ್ರೆಸ್‌ಗೆ ಕಗ್ಗಂಟಾಗಿದ್ದ ಶಿಗ್ಗಾಂವಿ ಕ್ಷೇತ್ರದ ಟಿಕೆಟ್‌ ಕೊನೆಗೂ ಘೋಷಣೆ ಆಗಿದೆ. ತೀವ್ರ ಪೈಪೋಟಿ ನಡುವೆ ಯಾಸಿರ್​ ಅಹ್ಮದ್ ಖಾನ್​ಗೆ ಶಿಗ್ಗಾಂವಿ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ. ಇನ್ನು ವೈಶಾಲಿ ಕುಲಕರ್ಣಿ ಹಾಗೂ ಖಾದ್ರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್​ ಕೊಡಿಸುವಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಯಶಸ್ವಿಯಾಗಿದ್ದಾರೆ.

ಹಾನಗಲ್​ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರಾದ ಯಾಸೀರ್​ ಅಹ್ಮದ್​ ಖಾನ್​ ಪಠಾಣ್, ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋಲು ಕಂಡಿದ್ದರು. ಇದೀಗ ಉಪಚುನಾವಣೆಗೂ ಸಹ ಕಾಂಗ್ರೆಸ್​ ಹೈಕಮಾಂಡ್ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ ಅವರನ್ನೇ ಕಣಕ್ಕಿಳಿಸಿದೆ.

ಶಿಗ್ಗಾಂವಿ ಟಿಕೆಟ್ ಕೈ ತಪ್ಪಿದ್ದಕ್ಕೆ ಅಜ್ಜಂಪೀರ್‌ ಖಾದ್ರಿ ಕೆಂಡಕಾರಿದ್ದು, ಯಾಸಿರ್ ಅಹ್ಮದ್ ಒಬ್ಬ ರೌಡಿಶೀಟರ್ ಎಂದು ಗುಡುಗಿದ್ದಾರೆ.

ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಮೂರು ಕ್ಷೇತ್ರಗಳಲ್ಲಿ ಭರ್ಜರಿ ಶಕ್ತಿಪ್ರದರ್ಶನದ ಮೂಲಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

author single

L Ramprasad

Managing Director

comments

No Reviews