ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ!

ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ!

2024-09-06 05:33:54

ನವದೆಹಲಿ,ಸೆ.6: ಗೌರಿ-ಗಣೇಶ ಹಬ್ಬದ ದಿನದಂದು ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಕೆ ಮಾಡಲು ಮುಂದಾಗಿದೆ.

ನೂತನ ಪರಿಷ್ಕೃತ ದರವು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವ ಸಾಧ್ಯತೆ ಇದ್ದು, ಪ್ರತಿ ಲೀಟರ್ ಗೆ ಡೀಸೆಲ್ ದರ 6 ರೂ. ಹಾಗೂ ಪೆಟ್ರೋಲ್ ದರವನ್ನು 4 ರೂ. ಕಡಿತ ಮಾಡಲು ಕೇಂದ್ರಸರ್ಕಾರ ತೀರ್ಮಾನಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 72.75ರಿಂದ 70 ಡಾಲರ್‌ಗೆ ಇಳಿಕೆಯಾಗಿದ್ದರಿಂದ ತೈಲ ಬೆಲೆಯನ್ನು ಇಳಿಸಲು ಕೇಂದ್ರಸರ್ಕಾರ ಸಮ್ಮತಿಸಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ತೈಲ ಪೂರೈಕೆ ಮಾಡುವ ಕಂಪನಿಗಳ ಜೊತೆ ಚರ್ಚೆ ನಡೆಸಿದ್ದು, ಪರಿಷ್ಕೃತ ದರ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳು ನಡೆಯತ್ತಿರುವ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ತೈಲ ದರವನ್ನು ಪ್ರಸ್ತಾಪಿಸಬಹುದೆಂಬ ಹಿನ್ನಲೆಯಲ್ಲಿ ದರ ಇಳಿಸುವ ಕೇಂದ್ರ ಸರ್ಕಾರದ ತೀರ್ಮಾನ ದೇಶದ ಜನತೆ ಮತ್ತು ಎ‌ನ್.ಡಿ.ಎ ಸರ್ಕಾರಕ್ಕೆ ಬಹಳ ಅನುಕೂಲವಾಗುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಕೆ ಮಾಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ಕೇಂದ್ರ ಇದೀಗ ತೈಲ ದರ ಇಳಿಕೆಗೆ ಮುಂದಾಗಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್ಗೆ 85 ರೂ. ಇತ್ತು. ಈ ವೇಳೆಯೇ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಸಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ತೈಲ ದರವನ್ನು ಕೇಂದ್ರಸರ್ಕಾರ ತೀರ್ಮಾನಿಸುವುದಿಲ್ಲ. ಬದಲಿಗೆ ತೈಲ ಕಂಪನಿಗಳಾದ ಭಾರತೀಯ ತೈಲ ನಿಗಮ(ಐಓಸಿ), ಭಾರತ್
ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್.ಪಿ.ಸಿ.ಎಲ್) ನಿರ್ಧರಿಸುತ್ತವೆ. ಕಳೆದ ಮಾರ್ಚ್ 14ರಂದು ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 2 ರೂ. ಕಡಿತ ಮಾಡಿತ್ತು. ತೈಲ ದರವನ್ನು ಕಡಿಮೆ ಮಾಡಬೇಕೆಂದು ದೇಶದ ಅನೇಕ ರಾಜ್ಯಸರ್ಕಾರಗಳು ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದವು‌.

ಎಲ್ಲಾ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ!
ಪರಿಣಾಮ ದಿನನಿತ್ಯದ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳ ಸಾಗಾಣಿಕೆ ವೆಚ್ಚ ಇಳಿಕೆಯಾಗಿ ದೇಶದಲ್ಲಿ ಬೆಲೆ ಇಳಿಕೆ ದಿನಗಳು ಬರಲಿವೆ.

author single

L Ramprasad

Managing Director

comments

No Reviews