ಮುನಿರತ್ನರಿಂದ ನನಗೆ ಜೀವ ಬೆದರಿಕೆ ಇದೆ: ಸಿಎಂಗೆ ವೇಲು ದೂರು

ಮುನಿರತ್ನರಿಂದ ನನಗೆ ಜೀವ ಬೆದರಿಕೆ ಇದೆ: ಸಿಎಂಗೆ ವೇಲು ದೂರು

2024-09-23 07:02:07

ಬೆಂಗಳೂರು, ಸೆ.23: ಬಿಜೆಪಿ ಶಾಸಕ ಮುನಿರತ್ನ ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡು  ಒದ್ದಾಡುತ್ತಿದ್ದಾರೆ. 2 ಕೇಸ್​ಗಳಿಂದ ಆಚೆ ಬಂದು ಮತ್ತೊಂದರಲ್ಲಿ ಜೈಲು ಪಾಲಾಗಿದ್ದಾರೆ. ಈ ಮಧ್ಯೆ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಪುತ್ರನಿಗೆ ಮುನಿರತ್ನ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿತ್ತು. ಮುನಿರತ್ನ ಬೆಂಬಲಿಗರಿಂದ ಜೀವ ಬೆದರಿಕೆ ಹಿನ್ನೆಲೆ ಮಾಜಿ ಕಾರ್ಪೊರೇಟರ್​ ವೇಲು ನಾಯಕ್ ಹಾಗೂ ದಲಿತ ಸಂಘಟನೆ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ.

ದೂರು ನೀಡಿದ್ದವರಿಗೆ ಹಾಗೂ ನಮಗೆ ಜೀವ ಬೆದರಿಕೆ ಕರೆ ಬರುತ್ತಿವೆ. ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ನಮಗೆ ತೊಂದರೆ ಕೊಡುತ್ತಿದ್ದಾರೆ. ಮುನಿರತ್ನ ಆಪ್ತ ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಐ.ಎನ್.ರೆಡ್ಡಿ ಅವರನ್ನು ಸಸ್ಪೆಂಡ್ ಮಾಡುವಂತೆಯೂ ಸಿಎಂಗೆ ಮನವಿ ಮಾಡಲಾಗಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಮಾಜಿ ಕಾರ್ಪೊರೇಟರ್​ ವೇಲು ನಾಯಕ್, ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಐ.ಎನ್​​ ರೆಡ್ಡಿ ಅವರು ಮುನಿರತ್ನ ವಿರುದ್ಧದ ಪ್ರಕರಣದ ಸಾಕ್ಷಿನಾಶಕ್ಕೆ ಮುಂದಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುನಿರತ್ನಗೆ ಐ.ಎನ್​ ರೆಡ್ಡಿ ವಿರೋಧಿಗಳ ಫೋನ್ ಟ್ಯಾಪ್​ನಿಂದ ಹಿಡಿದು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ. ಸಾಕ್ಷಿ ನಾಶಪಡಿಸುವವರಲ್ಲಿ ಇನ್ಸ್​ಪೆಕ್ಟರ್​ ಐ.ಎನ್.ರೆಡ್ಡಿ ಪ್ರಮುಖರು. ಹೀಗಾಗಿ ಅವರನ್ನು ಅಮಾನತು ಮಾಡಬೇಕು. ಜೊತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ವೇಲು ನಾಯಕ್ ಆಗ್ರಹಿಸಿದ್ದಾರೆ.

ಮುನಿರತ್ನ ಆಪ್ತೆ ಸುನಂದಮ್ಮ ನಿನ್ನೆ ಸಾಕ್ಷಿ ಹೇಳುವವರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ್ದ ಬಗ್ಗೆ ಸಿಸಿಟಿವಿ ದೃಶ್ಯ ಸಮೇತ ದೂರು ಕೊಟ್ಟಿದ್ದೇವೆ.

ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪವೇ ಕೇಳಿಬಂದಿದೆ. ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆಯ ಪುತ್ರನಿಗೇ ಬೆಂಬಲಿಗರು ಬೆದರಿಕೆ ಹಾಕಿದ್ದಾರಂತೆ.

ಎಲ್ಲಾದ್ರೂ ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದರೆ ನಿಮ್ಮ ಮನೆಗೆ ಬೆಂಕಿಯನ್ನೇ ಹಚ್ಚುತ್ತೇವೆ. ನಿಮ್ಮ ವಂಶವೇ ಇರದಂತೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಸಾಕ್ಷಿಗಳ ಮನೆಗೆ ನುಗ್ಗಿ ಬಿಜೆಪಿ ಕಾರ್ಯಕರ್ತೆಯರೊಬ್ಬರು ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ತೆಯ ಮಗ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

author single

L Ramprasad

Managing Director

comments

No Reviews