ಮೂಡಾ ಹಗರಣ: ಅಧಿಕಾರಿಗಳ ಕಳ್ಳಾಟದ ದಾಖಲೆ ಬಹಿರಂಗ!
2024-08-22 09:13:14
ಮೈಸೂರು, ಆ.22: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ. ಅಲ್ಲದೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಾಸಿಕ್ಯೂಷನ್ ವಿರುದ್ಧ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇನ್ನು ಈ ಮುಡಾದಲ್ಲಿ ನಡೆದ ಹಗರಣ ಒಂದರ ಮೇಲೊಂದು ಆಚೆ ಬರಲಾರಂಭಿಸಿವೆ. ಸಾಮಾಜಿಕ ಹೋರಾಟಗಾರರು, ಆರ್ಟಿಐ ಕಾರ್ಯಕರ್ತರು ಒಂದೊಂದೇ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇವೆಲ್ಲದರ ಮಧ್ಯ ಮುಡಾದಲ್ಲಿ ಅಧಿಕಾರಿಗಳು ಮಾಡಿರುವ ಕಳ್ಳಾಟ ಗೋಲ್ ಮಾಲ್ ಗಳ ದಾಖಲೆ ಕೂಡ ಸಿಕ್ಕಿದೆ.
8ನೇ ವಯಸ್ಸಿನಲ್ಲಿ ಭೂಮಿ ಕಳೆದುಕೊಂಡ. ತನ್ನ 68 ನೇ ವಯಸ್ಸಿನಲ್ಲಿ ಬದಲಿ ನಿವೇಶನಕ್ಕಾಗಿ ಅರ್ಜಿ. ಹೌದು, ಇದು ಸಾಧ್ಯನಾ ಎಂದು ಕೇಳಿದ್ರೆ ಇದೆಲ್ಲ ಮೈಸೂರು ಮುಡಾದಲ್ಲಿ ಸಾಧ್ಯವಿದೆ. ಮೈಸೂರಿನ ಅಬ್ದುಲ್ ವಾಹಿದ್ ವ್ಯಕ್ತಿ ತಮ್ಮ ದಾಖಲೆಗಳ ಪ್ರಕಾರ 1955 ರಲ್ಲಿ ಜನಿಸಿದ್ದಾರೆ. ಆಗಲೇ ಅವರ ಬಳಿ ಮೈಸೂರಿನ ಬೆಲವತ್ತ ಗ್ರಾಮದಲ್ಲಿ 4 ಎಕರೆ 39 ಗುಂಟೆ ಜಮೀನಿದ್ದು ,ಆ ಜಮೀನನ್ನು ಮುಡಾ 1962 ರಲ್ಲಿ ವಶಪಡಿಸಿಕೊಂಡಿತಂತೆ. ಆದ್ರೆ ಅಬ್ದಲ್ ವಾಹಿದ್ ಅಂದಿನಿಂದ ಮುಡಾದಿಂದ ಯಾವುದೇ ಪರಿಹಾರ ಪಡೆದಿರಲಿಲ್ಲವಂತೆ. ಹೀಗಾಗಿ 2023 ರಲ್ಲಿ ಕೋರ್ಟ್ ಮೂಲಕ ಮುಡಾದಲ್ಲಿ ಬದಲಿ ನಿವೇಶ ಪಡೆಯಲು ಮುಂದಾಗಿದ್ದಾರೆ.
ಆದ್ರೆ ನ್ಯಾಯಾಧೀಶರು ಈ ಬಗ್ಗೆ ಅನುಮಾನಗೊಂಡು ಮುಡಾಕ್ಕೆ ಹಾಗೂ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಯಾವಾಗ ನ್ಯಾಯಾಧೀಶರು ಅನುಮಾನಗೊಂಡರು ಆಗಲೇ ಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಾಪಸ್ಸು ಪಡೆದಿದ್ದಾರೆ. ಆದ್ರೆ ವಾಪಸ್ಸು ಪಡೆದು ಸುಮ್ನನಿದ್ರೆ ಏನಿರಲಿಲ್ಲ, ಮುಡಾದಲ್ಲೇ ಅಂದಿನ ಆಯುಕ್ತ ದಿನೇಶ್ ರಿಂದ 55260 ಚದರ ಅಡಿ ಬದಲಿ ನಿವೇಶನವನ್ನ ಮಂಜೂರು ಮಾಡಿಕೊಂಡಿದ್ದಾರೆ.
ಇನ್ನು ಇದಷ್ಟೆ ಅಲ್ಲದೆ ಈ ವ್ಯಕ್ತಿಯ ಇರುವಿಕೆ ಬಗ್ಗೆಯು ಸಾಕಷ್ಟು ಅನುಮಾನ ಇದೆ. ಈತ ನೀಡಿರುವ ದಾಖಲೆ ಪ್ರಕಾರ ಈತ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ. ಆದ್ರೆ ಉದಯಗಿರಿ ಪೋಸ್ಟ್ ಎಂದು ಆಧಾರ್ ಕಾರ್ಡಿನಲ್ಲಿ ನಮೂದಾಗಿದೆ. ಇಷ್ಟೆಲ್ಲ ಅನುಮಾನ ಬರುವಂತ ಪ್ರಕರಣ ಇದ್ದರು ಆಯುಕ್ತರು ಬದಲಿ ನಿವೇಶನ ಹೇಗೆ ಮಂಜೂರು ಮಾಡಿದ್ದಾರೆ ಅನ್ನುವುದು ಸಾಕಷ್ಟು ಮೂಡಿಸಿದೆ.
ಅದೇನೆ ಇರಲಿ ಭೂಮಿ ಕಳೆದುಕೊಂಡು 60 ವರ್ಷದ ನಂತರ ಈಗ ಬದಲಿ ನಿವೇಶನ ಕೊಡುತ್ತಾರೆ ಅಂದರೆ ನಿಜಕ್ಕೂ ಅಧಿಕಾರಿಗಳು ಎಷ್ಟರ ಮಟ್ಟಿಗೆ ಗೋಲ್ ಮಾಲ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇನ್ನಾದರೂ ಅಧಿಕಾರಿಗಳ ವಿರುದ್ಧ ಕ್ರಮವಾಗುತ್ತಾ? ಎಂಬ ಬಗ್ಗೆ ಕುತೂಹಲ ಕೆರಳಿಸಿದೆ.
comments
Log in to write reviews