ಮುಡಾ ಹಗರಣ: ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು?
2024-08-21 02:31:01
ಮೈಸೂರು, ಆ.21: ಮುಡಾ ಸೈಟ್ ಹಗರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ದಾಖಲೆಯನ್ನು ತಿರುಚಿದ್ದಾರೆಯೇ? ಸಿಎಂ ಸಿದ್ದರಾಮಯ್ಯ ಪತ್ನಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಮನವಿ ಮಾಡಿ ಸಲ್ಲಿಸಿರುವ ಪತ್ರವನ್ನೇ ತಿರುಚಿದ್ದಾರೆಯೇ? ಎಂಬ ಅನುಮಾನ ಇದೀಗ ಮೂಡಿದೆ. ಯಾವ ಸ್ಥಳದಲ್ಲಿ ಪರ್ಯಾಯ ನಿವೇಶನ ಕೊಡಬೇಕು ಎಂದು ಬರೆದ ಜಾಗಕ್ಕೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದಿದೆ.
ವಿಜಯನಗರದ 2 ಮತ್ತು 3ನೇ ಹಂತದಲ್ಲೇ ನಿವೇಶನ ಕೊಡುವಂತೆ ಸಿದ್ದರಾಮಯ್ಯ ಪತ್ನಿ ಕೇಳಿದ್ದರೇ? ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ. ವೈಟ್ನರ್ ಹಾಕಿ ಅಳಿಸಿರುವುದರಿಂದ ಈ ಪ್ರಶ್ನೆ ಮೂಡಿದೆ.
ಇದೀಗ ಸಿಎಂ ಪತ್ನಿ ಬರೆದ ಪತ್ರ ಬಹಿರಂಗವಾಗಿರುವುದರಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಂತಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿಎಂ ಪತ್ನಿ ಪಾರ್ವತಮ್ಮ ಬರೆದ ಪತ್ರ ಲಭ್ಯವಾಗಿದ್ದು, ಪ್ರಾಧಿಕಾರ ಬಡಾವಣೆ ನಿರ್ಮಿಸಿ ನಿವೇಶನ ಹಂಚಿದ ಮೇಲೆ ಆ ಜಮೀನನ್ನು ಸಿಎಂ ಪತ್ನಿಯ ಸಹೋದರ ಖರೀದಿಸಿದ್ದರೇ? ಎಂಬ ಪ್ರಶ್ನೆಗೂ ಕಾರಣವಾಗಿದೆ. ಸಿಎಂ ಪತ್ನಿ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ಅದರ ಸ್ಪಷ್ಟ ಉಲ್ಲೇಖ.
ಸಿಎಂ ಪತ್ನಿ ಮುಡಾಗೆ ಬರೆದ ಪತ್ರದ ಪ್ರತಿ...
ಪತ್ರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2001 ರಲ್ಲೇ ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿದೆ ಎಂದು ಪತ್ರದಲ್ಲಿ ನಮೂದಾಗಿದೆ. ಕೆಸರೆ ಗ್ರಾಮದ ಜಮೀನನ್ನು ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಈ ಜಮೀನನ್ನು ಸಿಎಂ ಪತ್ನಿ ಸಹೋದರ ಖರೀದಿ ಮಾಡಿರುವುದು 2004ರಲ್ಲಿ. ಹಾಗಾದರೆ ಸ್ವಾಧೀನಪಡಿಸಿಕೊಂಡು ನಿವೇಶನ ಹಂಚಿದ ಜಾಗವನ್ನು ಸಿಎಂ ಸಹೋದರ ಹೇಗೆ ಖರೀದಿ ಮಾಡಿದರು? ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ.
comments
Log in to write reviews