ಮುಡಾ ದಾಖಲೆ ಸೋರಿಕೆ: ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಎಸ್ಪಿ ವಿರುದ್ಧ ದೂರು
2024-10-06 06:57:02
ಮೈಸೂರು, ಅಕ್ಟೋಬರ್ 6: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ಕಡತ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಮತ್ತು ಹಿಂದಿನ ಲೋಕಾಯುಕ್ತ ಎಸ್ಪಿ ಸುಜಿತ್ ವಿರುದ್ಧ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಲೋಕಾಯುಕ್ತ ನೀಡಿದ್ದ ಸರ್ಚ್ ವಾರಂಟ್ ಆಧರಿಸಿ ಜು.26ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ದಾಳಿ ವಿಚಾರವನ್ನು ಮೈಸೂರು ಲೋಕಾಯುಕ್ತದ ಅಂದಿನ ಅಧೀಕ್ಷಕ ಸುಜಿತ್ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದರು.
ಭೈರತಿ ಸುರೇಶ್ ಕೂಡಲೇ ಮೈಸೂರಿಗೆ ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾದಲ್ಲಿನ ಕೆಲವು ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದರು. ಈ ಕಡತದಲ್ಲಿನ ದಾಖಲೆಗಳನ್ನು ಇಟ್ಟುಕೊಂಡೇ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಈ ರೀತಿ ಸಹಾಯ ಮಾಡಿದ ಕಾರಣಕ್ಕಾಗಿ ಮೈಸೂರು ಲೋಕಾಯುಕ್ತದಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ಸುಜೀತ್ ಅವರನ್ನು ಬೆಂಗಳೂರಿನ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
comments
Log in to write reviews