ಇಂದು ಮಧ್ಯಾಹ್ನ ಮುಡಾ ಕೇಸ್ ವಿಚಾರಣೆ: ವಾರದಲ್ಲಿ ತೀರ್ಪು ಸಾಧ್ಯತೆ!

ಇಂದು ಮಧ್ಯಾಹ್ನ ಮುಡಾ ಕೇಸ್ ವಿಚಾರಣೆ: ವಾರದಲ್ಲಿ ತೀರ್ಪು ಸಾಧ್ಯತೆ!

2024-09-09 01:52:25

ಬೆಂಗಳೂರು, ಸೆ.9: ಮುಡಾ‌ ಸೈಟ್ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3:30 ಕ್ಕೆ ಪುನರಾರಂಭಗೊಳ್ಳಲಿದೆ.

ಈಗಾಗಲೇ 4 ದಿನ ಈ ಅರ್ಜಿಯ ವಿಚಾರಣೆ ನಡೆದಿದ್ದು, ಬಹುತೇಕ ಅಂತ್ಯವಾಗಿದೆ. ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ದೂರುದಾರರ ಪರ ವಕೀಲರು ಸಹ ವಾದ ಅಂತ್ಯಗೊಳಿಸಿದ್ದಾರೆ. ಇದೀಗ ಇಂದು ಮಧ್ಯಾಹ್ನ 3:30 ಕ್ಕೆ ಮತ್ತೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯಗೆ ಆತಂಕ 
ಸೃಷ್ಟಿಯಾಗಿದೆ.

ಇಂದು ಹೈಕೋರ್ಟ್‌ನಲ್ಲಿ ಏನಾಗಲಿದೆ?
ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ವಿಷಯ ಏನಂದರೆ, ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟ ಅಡ್ವೊಕೆಟ್ ಜನರಲ್‌ ಅಭಿಪ್ರಾಯ ಆಧರಿಸಿ ಶಿಫಾರಸು ಮಾಡಿತ್ತು. ಅಡ್ವೊಕೇಟ್ ಜನರಲ್ ನೀಡಿದ್ದ ಅಭಿಪ್ರಾಯದಂತೆ 91 ಪುಟಗಳ ಪ್ರತಿಕ್ರಿಯೆ ನೀಡಿತ್ತು. ಆದರೆ, ಶಿಫಾರಸು ಮಾಡುವಾಗ ಸಚಿವ ಸಂಪುಟ ತನ್ನ ವಿವೇಚನೆ ಬಳಸಿಲ್ಲ. ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನೇ ಯಥಾವತ್ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಕಾಮಾ, ಫುಲ್ ಸ್ಟಾಪ್ ಕೂಡಾ ಬದಲಿಸಿಲ್ಲ ಎಂದು ಹೈಕೋರ್ಟ್  ವಿಚಾರಣೆಯಲ್ಲಿ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದಾರೆ. ಈ ವಾದಕ್ಕೆ ಅಡ್ವೊಕೇಟ್ ಜನರಲ್ ನೀಡಿದ್ದ ಕಾನೂನು ಅಭಿಪ್ರಾಯದ ಕುರಿತು ಇಂದು ವಾದ ನಡೆಯಲಿದೆ. ಎಜಿ ಶಶಿಕಿರಣ್ ಶೆಟ್ಟಿ ಅವರು ರಾಜ್ಯಸರ್ಕಾರದ ಕ್ರಮ ಮತ್ತು ತಮ್ಮ ಲೀಗಲ್ ಒಪಿನಿಯನ್ ಸಮರ್ಥಿಸಿಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ ಇಂದು ಒಂದೂವರೆ ಗಂಟೆಗಳ ಕಾಲ ಮಾತ್ರ ವಿಚಾರಣೆ ನಡೆಯಲಿದ್ದು, ಸೆಪ್ಟೆಂಬರ್ 12 ಕ್ಕೆ ವಿಚಾರಣೆ ಮುಂದೂಡಿಕೆಯಾಗಲಿದೆ.

ಹೈಕೋರ್ಟ್‌ನಲ್ಲಿ ಮುಡಾ ಹಗರಣದ ವಿಚಾರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇಂದು ಸಿಎಂ ವಿರುದ್ಧದ ಕೇಸ್ ಹೈಕೋರ್ಟ್‌ನಲ್ಲಿ ಏನಾಗಲಿದೆ ಎಂಬುದರ ಮೇಲೆ ರಾಜಕೀಯ ಭವಿಷ್ಯವೂ ಅಡಗಿದೆ. ಇದೇ ವಾರಾಂತ್ಯದಲ್ಲಿ ಆದೇಶವೂ ಹೊರಬೀಳಬಹುದು. ಹೀಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ತಾವು ಸಿಎಂ ಆಗಲು ರಾಜ್ಯದ ಅನೇಕ ಕೈ ನಾಯಕರು ಸದ್ದಿಲ್ಲದೆ  ಹೈಕಮಾಂಡ್ ಮುಂದೆ ಗುಟ್ಟಾಗಿ ಲಾಬಿ ನಡೆಸಿದ್ದಾರೆ.

author single

L Ramprasad

Managing Director

comments

No Reviews