ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಹಣದ ಅವ್ಯವಹಾರ: ದರ್ಶನ್ ಗೆ ಮತ್ತೊಂದು ಸಂಕಷ್ಟ
2024-09-25 10:19:12
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಜೈಲು ಸೇರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಅವರು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದು, ಜಾಮೀನಿಗಾಗಿ ಹಾತೊರೆಯುತ್ತಿದ್ದಾರೆ. ಕುಟುಂಬದವರ ಜೊತೆ ದರ್ಶನ್ ಅವರು ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಹಣದ ವಹಿವಾಟು ಕೂಡ ನಡೆದಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಈ ಕೇಸ್ನಲ್ಲಿ ದರ್ಶನ್ ಅವರ ವಿಚಾರಣೆ ನಡೆಯಲಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಗುರುವಾರ, (ಸೆ. 26) ಅಥವಾ ಶುಕ್ರವಾರ (ಸೆ. 27) ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬರಲಿದ್ದಾರೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್ನ ವಿಚಾರಣೆ ಮಾಡಲಿದ್ದಾರೆ. ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ರವಾನೆ ಆಗಿದೆ.
ಕೊಲೆ ಆರೋಪ ಮತ್ತೊಬ್ಬರ ಮೇಲೆ ಹೊರಿಸಲು ದರ್ಶನ್ ಪ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದರು. ಅಷ್ಟು ದೊಡ್ಡ ಮೊತ್ತದ ಕ್ಯಾಶ್ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸದ್ಯ ಐಟಿ ಅಧಿಕಾರಿಗಳು ಬರುವುದನ್ನು ಬಳ್ಳಾರಿ ಸೆಂಟ್ರಲ್ ಜೈಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದರ್ಶನ್ ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆ ಸೆಪ್ಟೆಂಬರ್ 27ರಂದು ಕೋರ್ಟ್ನಲ್ಲಿ ನಡೆಯಲಿದೆ. ಈ ಪ್ರಕರಣದಲ್ಲಿ ಅವರು ಜಾಮೀನು ಪಡೆಯುವ ನಿರೀಕ್ಷೆಯಲ್ಲಿ ಇರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಅವರು ಉತ್ತರ ನೀಡಬೇಕಿದೆ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಬೆಂಗಳೂರು ಜೈಲಿನಿಂದ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.
comments
Log in to write reviews