ಹಾಲಿನ ದರ ಹೆಚ್ಚಳದ ಮುನ್ಸೂಚನೆ ನೀಡಿದ ಸಚಿವ ಕೆ.ಎನ್ ರಾಜಣ್ಣ
2024-09-14 07:38:09
ತುಮಕೂರು, ಸೆ.14: ರಾಜ್ಯದ ರೈತರಿಗೆ ಈಗಾಗಲೇ ಪ್ರತಿ ಲೀಟರ್ ಹಾಲಿಗೆ 31 ರೂ. ನೀಡಲಾಗುತ್ತಿದೆ ಹಾಗೂ ಗ್ರಾಹಕರಿಗೆ ಒಂದು ಲೀಟರಿಗೆ 41 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೀಗಿರುವಾಗ ದರ ಪರಿಷ್ಕರಿಸುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಗರದ ಬಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ನೀಡಲಾಗುವುದು. ಶೂನ್ಯ ಬಡ್ಡಿ ದರದಲ್ಲಿ 50 ಸಾವಿರ ರೂ.ವರೆಗೆ ಅಲ್ಪಾವಧಿ ಸಾಲವನ್ನು ನೀಡಲಾಗುವುದು. ಅಲ್ಪಾವಧಿ, ಮಧ್ಯಮಾವಧಿ ಸಾಲ 15 ಲಕ್ಷ ರೂ.ವರೆಗೆ, ಶೇ.3ರ ಬಡ್ಡಿದರದಲ್ಲಿ ನೀಡಲಾಗುತ್ತಿದೆ.
ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ 1630 ಕೋಟಿ ರೂ. ಠೇವಣಿಯನ್ನು ಸಂಗ್ರಹ ಮಾಡಿದೆ. 1 ಸಾವಿರ ಕೋಟಿ ರೂ. ಕೃಷಿಯೇತರ ಸಾಲ, 759 ಕೋಟಿ ರೂ. ಕೃಷಿ ಸಾಲ ನೀಡಿದೆ. ಅಪೆಕ್ಸ್ ಬ್ಯಾಂಕ್‌ನಿಂದ ತೆಗೆದುಕೊಂಡ ಸಾಲವನ್ನು ಸಹ ಬ್ಯಾಂಕ್ ಮರುಪಾವತಿ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ವಿಎಸ್‌ಎಸ್‌ಎನ್‌ಗಳ ಮೂಲಕವೇ ಚಿನ್ನಾಭರಣ ಸಾಲವನ್ನು ನೀಡಲು ಸಹಕಾರಿ ಬ್ಯಾಂಕ್‌ಗಳಿಗೂ ತಿಜೋರಿ ನೀಡಲಾಗುತ್ತಿದೆ. ರೈತರಿಗೆ ಶೇ.11 ಹಾಗೂ ಇತರರಿಗೆ ಶೇ.12ರ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ ನೀಡಲಾಗುವುದು. ಇದರಿಂದ ಜಿಲ್ಲೆಯಲ್ಲಿರುವ ಪಾನ್ ಬ್ರೋಕರ್‌ಗಳ ಸಂಖ್ಯೆ ಇಳಿಮುಖವಾಗಲಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಬದಲಾವಣೆಯಾಗುವುದಿಲ್ಲ. ಅವರೇ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಪರ ಇದೆ. ಈ ವಿಚಾರದಲ್ಲಿ ಹೈಕಮಾಂಡ್ ಬಲಿಷ್ಠವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ. ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಕೆಲಸ ನನ್ನ ಅವಧಿಯಲ್ಲೇ ಮುಗಿಸುತ್ತೇನೆ ಎಂದು ಸಚಿವ ಕೆ.ಎನ್ ರಾಜಣ್ಣ ಹೊಸ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.
comments
Log in to write reviews