ಕೊನೆಗೂ ಸಿಎಂ ಸಿದ್ದರಾಮಯ್ಯ ಪತ್ನಿ ವಿಚಾರಣೆ ನಡೆಸಿದ ಲೋಕಾಯುಕ್ತ

ಕೊನೆಗೂ ಸಿಎಂ ಸಿದ್ದರಾಮಯ್ಯ ಪತ್ನಿ ವಿಚಾರಣೆ ನಡೆಸಿದ ಲೋಕಾಯುಕ್ತ

2024-10-25 09:59:50

ಮೈಸೂರು, ಅ.25: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಹಿನ್ನಲ್ಲೆ ಇಂದು ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದರು. ಮುಡಾ ಪ್ರಕರಣದ ಎಫ್ಐಆರ್​ನಲ್ಲಿ 2ನೇ ಆರೋಪಿಯಾಗಿರುವ ಬಿ.ಎಂ.ಪಾರ್ವತಿ ಲೋಕಾಯುಕ್ತ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದರು.

ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಯಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದು, ಸುಮಾರು 3 ಗಂಟೆ ಕಾಲ ಹೇಳಿಕೆ ದಾಖಲಿಸಿ ತೆರಳಿರುವ ಬಗ್ಗೆ ಮಾಹಿತಿ ಇದೆ. ಮೈಸೂರು ಲೋಕಾಯುಕ್ತ ಪೊಲೀಸರು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗಾಗಿ ಪಾರ್ವತಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇನ್ನು ಮುಡಾ ಪ್ರಕರಣ ವಿಚಾರವಾಗಿ ಈಗಾಗಲೇ ಎ3 ಮಲ್ಲಿಕಾರ್ಜುನಸ್ವಾಮಿ, ಎ4 ದೇವರಾಜು ಕರೆಸಿ ಮೈಸೂರು ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ A1 ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ.

ಅಕ್ಟೋಬರ್ 18–19ರಂದು ಎರಡು ದಿನ ಕೇಂದ್ರದ ಜಾರಿನಿರ್ದೇಶನಾಲಯ ನಡೆಸಿದ್ದ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ ಹೆಸರಿನ ಜಮೀನನ್ನು ದೇವನೂರು ಬಡಾವಣೆ ನಿರ್ಮಿಸಲು ಮುಡಾ ವಶಪಡಿಸಿಕೊಂಡಿದ್ದರೂ ಆ ಭೂಮಿ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇರುವುದು ಅದರಲ್ಲಿ ಪ್ರಮುಖ ದಾಖಲೆಯಾಗಿತ್ತು.

ಜಮೀನು ಮರು ಪರಿಶೀಲಿಸುವಂತೆ ಲೋಕಾಯುಕ್ತ ಎಸ್​ಪಿ ಉದೇಶ್‌ಗೆ ಸ್ನೇಹಮಯಿ‌ ಕೃಷ್ಣ ಮನವಿ
ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣ ತನಿಖೆ ವಿಚಾರವಾಗಿ ದೂರುದಾರ ಸ್ನೇಹಮಯಿ‌ ಕೃಷ್ಣ  ಲೋಕಾಯುಕ್ತ ಎಸ್​ಪಿ ಉದೇಶ್‌ಗೆ ಕೆಸರೆ ಗ್ರಾಮದ ಸರ್ವೇ ನಂ 464ರ 3.16 ಗುಂಟೆ ಜಮೀನು ಮರು ಪರಿಶೀಲನೆಗೆ ಮನವಿ ಮಾಡಿದ್ದಾರೆ.

ಪರಿಶೀಲನೆ ವೇಳೆ ಗಿಡ ಗಂಟೆಗಳು ಜಾಸ್ತಿ‌ ಇದ್ದವು, ಆದ್ದರಿಂದ ವಸ್ತುಸ್ಥಿತಿ ಅಧ್ಯಯನ ಸರಿಯಾಗಿ ಆಗಿಲ್ಲ. ಬಡಾವಣೆ ನಿವೇಶನ ಮೋರಿ ರಸ್ತೆಗಳು ಸರಿಯಾಗಿ ಕಾಣುತ್ತಿಲ್ಲ. ಮತ್ತೊಮ್ಮೆ ಪರಿಶೀಲನೆ ಮಾಡಿ ಫೋಟೋ, ವಿಡಿಯೋ ದಾಖಲೆ ಸಂಗ್ರಹಿಸುವಂತೆ ಮನವಿ ಮಾಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಕುಮಾರನಾಯ್ಕ್​ ಅವರನ್ನು ಮತ್ತೊಮ್ಮೆ ವಿಚಾರಣೆ ಮಾಡುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

author single

L Ramprasad

Managing Director

comments

No Reviews