ಬಂಧಿತ ಶಾಸಕ ಮುನಿರತ್ನ ಅಮಾನತುಗೊಳಿಸುವಂತೆ ಸ್ಪೀಕರ್ ಗೆ ಕಾನೂನು ಸಚಿವರ ಪತ್ರ!
2024-09-23 10:08:25
ಬೆಂಗಳೂರು, ಸೆ.23: ಶಾಸಕ ಮುನಿರತ್ನ ಮಾಡಿರುವ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ನಲ್ಲಿ ಜಾಮೀನು ಪಡೆದರೂ ಮತ್ತಷ್ಠು ಗಂಭೀರ ಸ್ವರೂಪದ ಹನಿಟ್ರ್ಯಾಪ್ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇನ್ನು ಶಾಸಕ ಮುನಿರತ್ನ ಪ್ರಕರಣಗಳ ತನಿಖೆಯನ್ನು ರಾಜ್ಯಸರ್ಕಾರ ಎಸ್ಐಟಿಗೆ ವಹಿಸಿದೆ. ಮತ್ತೊಂದೆಡೆ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿವೆ. ಇದೆಲ್ಲದರ ಮಧ್ಯ ವಿಧಾನಸಭೆ ಸದಸ್ಯತ್ವದಿಂದ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕೆಂದು ಸ್ವತಃ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು ಸ್ಪೀಕರ್ ಯು.ಟಿ ಖಾದರ್ಗೆ ಪತ್ರ ಬರೆದಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ, ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದಿದ್ದಾರೆ.
ಕಾನೂನು ಸಚಿವ ಎಚ್.ಕೆ ಪಾಟೀಲ್ ಬರೆದ ಪತ್ರದಲ್ಲೇನಿದೆ?
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ. ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ “ನೀತಿ-ನಿರೂಪಣಾ ಸಮಿತಿ” ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತೀ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು. ಸಂವಿಧಾನದತ್ತವಾಗಿ ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಾಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ವಿಧಾನಸಭೆ ಸದಸ್ಯರಾದ ಕೆ.ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
“ನೀತಿ-ನಿರೂಪಣಾ ಸಮಿತಿ” ರಚನೆ ಮಾಡಿ. ಆ ಸಮಿತಿಯ ಮೂಲಕ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದು ಸ್ಪೀಕರ್ ಯುಟಿ ಖಾದರ್ ಅವರಿಗೆ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
comments
Log in to write reviews