ಕಮಲಾ ಹ್ಯಾರಿಸ್ ವಿಶೇಷ ಆಹ್ವಾನ: ರಾತ್ರಿ ಅಮೆರಿಕಾಕ್ಕೆ ಹೊರಟ ಡಿ.ಕೆ.ಶಿ!
2024-09-08 06:14:02
ಬೆಂಗಳೂರು, ಸೆ.8: ಜಗತ್ತಿನ ನಂ.1 ದೊಡ್ಡಣ್ಣನಂತಿರುವ ಅಮೆರಿಕಾ ದೇಶದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣಾ ರಂಗೇರಿದೆ. ಈ ಮಧ್ಯೆ ಅಮೆರಿಕದ ಉಪಾಧ್ಯಕ್ಷೆ ಹಾಗೂ ಪ್ರಸ್ತುತ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು ಡಿ.ಕೆ ಶಿವಕುಮಾರ್ಗೆ ವಿಶೇಷ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಇಂದು ಭಾನುವಾರ ರಾತ್ರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ(ಸೆ.9) ಹೈಕೋರ್ಟ್ನಲ್ಲಿ ಮುಡಾ ಹಗರಣದ ಮಹತ್ವದ ವಿಚಾರಣೆ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅಮೆರಿಕಾ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರ ವೋಟ್ ಬ್ಯಾಂಕ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಗಳು ಮತ್ತು ಐಟಿ ಇಂಜಿನಿಯರ್ ಗಳ ವೋಟ್ ಬ್ಯಾಂಕ್ ಅನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಅಮೆರಿಕಾಕ್ಕೆ ಬರಲು ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೀಗ
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಅಮೆರಿಕದಿಂದ ಆಹ್ವಾನ ಬಂದಿದೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಆಹ್ವಾನದ ಮೇರೆಗೆ ಡಿ.ಕೆ ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತ ಇಂದು ಭಾನುವಾರ ರಾತ್ರಿ ಅಮೆರಿಕ ಫ್ಲೈಟ್ ಹತ್ತಲಿದ್ದಾರೆ.
ರಾಜ್ಯದಲ್ಲಿ ಮುಡಾ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿರುವ ಮಧ್ಯ ಸಿಎಂ ಕುರ್ಚಿ ಕಾಳಗ ಶುರುವಾಗಿದೆ. ಇದೆಲ್ಲದರ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅಮೆರಿಕಾಕ್ಕೆ ತೆರಳಲಿದ್ದಾರೆ. ಈ ಸಂಬಂಧ ಇಂದು ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಅಮೆರಿಕಾ ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಳೆ ಹೈಕೋರ್ಟ್ನಲ್ಲಿ ಮುಡಾ ಹಗರಣದ ವಿಚಾರಣೆಯ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು(ಭಾನುವಾರ) ರಾತ್ರಿ ಬೆಂಗಳೂರಿನಿಂದ ಅಮೆರಿಕಾಕ್ಕೆ ತೆರಳಲಿದ್ದು, ಒಂದು ವಾರ ಕರ್ನಾಟಕದಲ್ಲಿ ಇರುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ಫ್ಯಾಮಿಲಿ ಅಮೆರಿಕದ ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಸೆಪ್ಟೆಂಬರ್ 14 ರಂದು ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.
ಇನ್ನು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ. ಕೆ.ಶಿವಕುಮಾರ್, ನಾನು ಒಂದು ವಾರ ಇರಲ್ಲ, ಅಮೆರಿಕ ಪ್ರವಾಸ ಕೈಗೊಂಡಿದ್ದೇನೆ. ಅಮೆರಿಕಾದಲ್ಲಿ ಖಾಸಗಿ ಕಾರ್ಯಕ್ರಮವಿದೆ, ಯಾರನ್ನೂ ಭೇಟಿ ಆಗಲ್ಲ. ವಿಶೇಷ ಫ್ಯಾಮಿಲಿ ಟ್ರಿಪ್ ಇದು, ಕುಟುಂಬ ಸಮೇತ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಆದ್ರೆ, ಯಾವ ಕಾರ್ಯಕ್ರಮ? ಏನು? ಎನ್ನುವ ಬಗ್ಗೆ ಡಿಸಿಎಂ ಹೇಳದೇ ಅಮೆರಿಕಾ ಪ್ರವಾಸದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಚೆನೈ ಮೂಲದವರು ಎಂದು ಅಮೆರಿಕಾದಲ್ಲಿ ಪ್ರಚಾರ ನಡೆಸಲಾಗಿದೆ. ಅಮೆರಿಕಾ ಉಪಾಧ್ಯಕ್ಷೆಯಾಗಿ ತಮಿಳುನಾಡಿನ ಚೆನೈಗೆ ಕಮಲಾ ಹ್ಯಾರಿಸ್ ಅವರು ಇಡ್ಲಿ, ಸಾಂಬಾರು ಬೇಕೆ ಬೇಕು ಎಂದು ಕೇಳಿ ತರಿಸಿಕೊಂಡು ಇಷ್ಟಪಟ್ಟು ಸೇವಿಸಿದ್ದರು. ಅಲ್ಲದೆ ನನಗೆ ದಕ್ಷಿಣ ಭಾರತದ ವಿಶೇಷ ಉಪಹಾರ ಇಡ್ಲಿ, ಸಾಂಬಾರು ಅಂದರೆ ಬಹಳ ಇಷ್ಟ ಎಂದು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಗ ಹೇಳಿಕೊಂಡಿದ್ದರು. ಹಿಂದೆ ವೃತ್ತಿಯಲ್ಲಿ ವಕೀಲರಾಗಿದ್ದ ಕಮಲಾ ಹ್ಯಾರಿಸ್ ಅವರು ಈ ಬಾರಿಯ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಗೆಲ್ಲುವ ಫೇವರಿಟ್ ಆಗಿ ಬಿಂಬಿತರಾಗಿದ್ದಾರೆ.
comments
Log in to write reviews