ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಮತಗಟ್ಟೆ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ!

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಮತಗಟ್ಟೆ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ!

2024-10-05 10:25:04

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಡುಗಡೆಯಾಗಿವೆ. ಸೆಪ್ಟೆಂಬರ್ 18ರಿಂದ ಮೂರು ಹಂತಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳು ಬಹಳ ಮಹತ್ವ ಪಡೆದಿತ್ತು. ಏಕೆಂದರೆ ಇದು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದು ಮೊದಲನೆಯ ಚುನಾವಣೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಈ ಬಾರಿ ಅತಂತ್ರ ರೀತಿಯ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂಬುದು ಸಮೀಕ್ಷೆಯ ಲೆಕ್ಕಾಚಾರ.

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹಲವು ಪ್ರಬಲ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಪಿಡಿಪಿ ಕೂಡ ಸ್ಪರ್ಧಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ (ಬಿಜೆಪಿ), ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಪ್ರಮುಖ ನಾಯಕರು ಹಲವು ವಾರಗಳ ಕಾಲ ವ್ಯಾಪಕ ಪ್ರಚಾರ ನಡೆಸಿದ್ದರು.

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು 3 ಹಂತದಲ್ಲಿ ಮತದಾನ ನಡೆದಿತ್ತು. ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗಿತ್ತು. ಸೆ.​ 25ರಂದು 2ನೇ ಹಂತದಲ್ಲಿ 26 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಅಕ್ಟೋಬರ್​ 1ರಂದು 40 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್​ 8ರಂದು 2 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಪ್ರಮುಖ ಎಕ್ಸಿಟ್ ಪೋಲ್ ಫಲಿತಾಂಶಗಳು ಇಲ್ಲಿವೆ:

ಇಂಡಿಯಾ ಟುಡೇ-ಸಿ ವೋಟರ್‌ ಪ್ರಕಾರ, ಎನ್‌ಸಿ-ಕಾಂಗ್ರೆಸ್: 40-48, ಬಿಜೆಪಿ: 27-32, ಪಿಡಿಪಿ: 6-12, ಇತರೆ: 6-11 ಸ್ಥಾನಗಳನ್ನು ಪಡೆಯಲಿವೆ.

ದೈನಿಕ್ ಭಾಸ್ಕರ್ ಎನ್‌ಸಿ-ಕಾಂಗ್ರೆಸ್ ಮೈತ್ರಿಗೆ ಮುನ್ನಡೆಯಾಗಲಿದೆ ಎಂದು ಹೇಳಿದೆ. ದೈನಿಕ್ ಭಾಸ್ಕರ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ 35-40 ಸ್ಥಾನ ಸಿಗಲಿದೆ. ಇದರ ನಂತರ ಬಿಜೆಪಿ 20-25 ಸ್ಥಾನಗಳಲ್ಲಿ ಮತ್ತು ಪಿಡಿಪಿಗೆ 4-7 ಸ್ಥಾನಗಳು ಸಿಗಲಿವೆ.

ಮ್ಯಾಟ್ರಿಜ್ ಸೀಟ್ ಪ್ರೊಜೆಕ್ಷನ್ ಪ್ರಕಾರ, ಬಿಜೆಪಿ – 25, ಕಾಂಗ್ರೆಸ್ – 12, ನ್ಯಾಷನಲ್ ಕಾನ್ಫರೆನ್ಸ್ -15, ಪಿಡಿಪಿ- 28, ಇತರೆ – 7 ಸ್ಥಾನಗಳನ್ನು ಪಡೆಯಲಿವೆ.

ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಕಾಂಗ್ರೆಸ್-ಎನ್‌ಸಿಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ಒಟ್ಟು ಅಸೆಂಬ್ಲಿ ಸ್ಥಾನಗಳಾದ 90 ಸ್ಥಾನಗಳ ಪೈಕಿ ಬಿಜೆಪಿ: 23-27, ಕಾಂಗ್ರೆಸ್-ಎನ್‌ಸಿ: 46-50, ಪಿಡಿಪಿ: 7-11, ಇತರೆ: 4-6 ಸ್ಥಾನಗಳನ್ನು ಪಡೆಯಲಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಶೇಕಡಾವಾರು ಶೇ. 63.88ರಷ್ಟಿತ್ತು. ಇದು ಲೋಕಸಭೆ ಚುನಾವಣೆಯಲ್ಲಿ ಕಂಡುಬಂದದ್ದಕ್ಕಿಂತ ಹೆಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ.57.89ರಷ್ಟು ಮತದಾನವಾಗಿತ್ತು.

author single

L Ramprasad

Managing Director

comments

No Reviews