ಎನ್.ಡಿ.ಎ ಟಿಕೆಟ್ ಸಿಗದಿದ್ದರೆ ಕೈ ಸೇರುವ ಮುನ್ಸೂಚನೆ ನೀಡಿದ ಸಿ.ಪಿ.ವೈ!

ಎನ್.ಡಿ.ಎ ಟಿಕೆಟ್ ಸಿಗದಿದ್ದರೆ ಕೈ ಸೇರುವ ಮುನ್ಸೂಚನೆ ನೀಡಿದ ಸಿ.ಪಿ.ವೈ!

2024-09-29 08:16:30

ಮಂಡ್ಯ, ಸೆ.29: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್.ಡಿ.ಎ ಟಿಕೆಟ್ ಕೈತಪ್ಪಿದರೆ ಕಾಂಗ್ರೆಸ್ ಸೇರುವ ವಿಚಾರವಾಗಿ ಅಡ್ಡ ಗೋಡೆಮೇಲೆ ದೀಪ ಇಟ್ಟ ಹಾಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಎಂಎಲ್ಸಿ ಯೋಗೇಶ್ವರ್ ಹೀಗೆ ಹೇಳಿದರು: "ಆ ಬಗ್ಗೆ ನಾನು ಯೋಚನೆ ಮಾಡಿಲ್ಲ. ಈ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಸ್ಪರ್ಧೆ ಮಾಡುವಂತೆ ಒತ್ತಡವಿದೆ, ಮುಂದೆ ನೋಡ್ತಿನಿ. ರಾಜಕಾರಣದಲ್ಲಿ ನಾವು ನೀವು ಯಾರು ಊಹೆ ಮಾಡದ ಘಟನೆಗಳು ನಡೆಯುತ್ತಿವೆ. ಪಕ್ಷಾಂತರ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿದರು.

ಬಳಿಕ ಚನ್ನಪಟ್ಟಣ ಉಪಚುನಾವಣಾ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಚುನಾವಣೆ ಮುಂದಿನ ತಿಂಗಳು 10 ರಂದು ಘೋಷಣೆ ಆಗಬಹುದು. ಎರಡೂ ಪಕ್ಷಗಳ ತೀರ್ಮಾನಕ್ಕೆ ಬದ್ದರಾಗಿರಬೇಕಿರುತ್ತದೆ. ಬಿಜೆಪಿ, ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ವರಿಷ್ಠರ ತೀರ್ಮಾನ ಕಾದು ನೋಡೋಣ. ಚುನಾವಣೆ ಸ್ಪರ್ಧೆಗೆ ಜನರ ಒತ್ತಾಯ ಇದೆ. ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಮಾತನ್ನು ಕೇಳಬೇಕು ಎಂದರು.

ಇನ್ನು ಚನ್ನಪಟ್ಟಣಕ್ಕೆ ಡಿಸಿಎಂ ಡಿ.ಕೆ.ಶಿ ಪದೇ ಪದೇ ಭೇಟಿ ಕುರಿತು ಯೋಗೇಶ್ವರ್ ಪ್ರತಿಕ್ರಿಯಿಸಿ, ಉಪಚುನಾವಣೆಗಳು ಬಂದ ವೇಳೆ ಆಡಳಿತ ಪಕ್ಷದವರು ಭೇಟಿ ನೀಡೋದು ಸಹಜ‌. ಉಪಚುನಾವಣೆ ಬಂದಾಗ ಘೋಷಣೆ ಮಾಡುವುದು ಸಾಮಾನ್ಯ. ಬಜೆಟ್​ಗೂ, ಉಪಚುನಾವಣೆ ಘೋಷಣೆಗೂ ವ್ಯತ್ಯಾಸ ಇದೆ. ಇಂತಹ ಕಾರ್ಯಕ್ರಮಗಳಿಗೆ ಅಷ್ಟೊಂದು ಮಹತ್ವ ಇಲ್ಲ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ವಿಚಾರವಾಗಿ ಮಾತನಾಡಿ, ಕಾನೂನು ಪ್ರಕ್ರಿಯೆ ಪ್ರಾರಂಭವಾಗಿದೆ. ಕಾನೂನು ಹೋರಾಟ ಮಾಡ್ತಿದ್ದಾರೆ. ನನಗೆ ಸ್ಪಷ್ಟ ಚಿತ್ರಣ ಇಲ್ಲ. ಮುಖ್ಯಮಂತ್ರಿಗಳು ಬಹಳ ಸೂಕ್ಷ್ಮಮತಿಯಿಂದ ಇದ್ದಾರೆ, ನೋಡೋಣ ಎಂದರು. 

ಚುನಾವಣಾ ಬಾಂಡ್ ಸುಲಿಗೆ ಪ್ರಕರಣ ಸಂಬಂಧ ಕೇಂದ್ರಸಚಿವರ ಮೇಲೆ FIR ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ನಾನು ನೋಡಿಲ್ಲ ಎಂದಷ್ಟೇ ಸಿ.ಪಿ.ವೈ ಪ್ರತಿಕ್ರಿಯಿಸಿದರು.

author single

L Ramprasad

Managing Director

comments

No Reviews