ಲಾರಿ ಮಾಲೀಕರ ಕೋ-ಆಪರೇಟಿವ್ ಸೊಸೈಟಿಯಲ್ಲಿ ಮನೆಗಳ್ಳರು!
2024-08-21 20:04:02
ವರದಿ: ನಾರ.ವೆಂಕಟೇಶ್ ಮೂರ್ತಿ, ಗುಡಿಬಂಡೆ
ಈ ಕೋ- ಅಪರೇಟಿವ್ ಸೊಸೈಟಿಗಳು ಹುಟ್ಟುಹಾಕಿಕೊಳ್ಳುವ ಉದ್ದೇಶ ಸಂಬಂಧ ಪಟ್ಟ ಸಂಘ ಸಂಘಟನೆ ಮಾಲೀಕರ, ಶ್ರಮಿಕ ಹಾಗೂ ಕಾರ್ಮಿಕರ ಅಭಿವೃದ್ಧಿ ಮತ್ತು ಏಳಿಗೆಗಾಗಿ. ಹಾಗಾಗಿ ಅನೇಕ ಕೃಷಿ, ತಾಂತ್ರಿಕ, ಸಾರಿಗೆ..... ಇತರೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಕೆಲ ಸಂಘ, ಸಂಘಟನೆಗಳವರು ಅವರವರಲ್ಲೇ ಒಂದಷ್ಟು ಪದಾಧಿಕಾರಿ, ಸದಸ್ಯರನ್ನು ಒಟ್ಟುಗೂಡಿಸಿ ಒಂದು ಸೊಸೈಟಿ ಮಾಡಿಕೊಂಡು ಅದರಲ್ಲಿ ಒಂದಷ್ಟು ಠೇವಣಿ, ಖಾತೆ, ಪಿಗ್ಮಿ ಇತರೆ ಹಣದ ಮೂಲಗಳನ್ನು ಕ್ರೋಢಿಕರಿಸಿಕೊಂಡು ಅವರುಗಳ ಆಗುಹೋಗು, ಹೆಚ್ಚು ಕಮ್ಮಿ, ಅಭಿವೃದ್ಧಿಗಳಿಗಾಗಿ ಸೊಸೈಟಿಯನ್ನು ನಡೆಸಿಕೊಂಡು ಹೋಗುತ್ತಾರೆ ಮತ್ತು ಇಂತಿಷ್ಟು ಕಾರ್ಯಾವಧಿಗೆ ಅಂತ ಅವುಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಬದಲಾಯಿಸುವುದು, ಕೆಲವು ಸೊಸೈಟಿಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಸುವುದು ಕೂಡಾ ಇರುತ್ತದೆ. ಹಾಗೇ ಇವುಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಮತ್ತು ಹಣ ದುರುಪಯೋಗಗಳಂತ ಅಕ್ರಮಗಳು ನಡೆಯಬಾರದೆoಬ ಉದ್ದೇಶದಿಂದ ಸರ್ಕಾರವು ಇವುಗಳನ್ನು ತನ್ನ ಸಹಕಾರ ಇಲಾಖೆ ಅಡಿಯಲ್ಲಿ ಇಟ್ಟುಕೊಂಡು ಅದರ ನೀತಿ, ನಿಯಮ, ನಿಭಂದನೆ ಗಳನ್ನು ಇವುಗಳ ಮೇಲೆಯೂ ಏರಿ ಅದರ ಭಾಗವೆoಬಂತೆ ವಾರ್ಷಿಕ ಲೆಕ್ಕ ವರದಿಯನ್ನೂ ಕಡ್ಡಾಯಗೊಳಿಸಿ ಸರ್ಕಾರದ ಸುಪರ್ದಿಯಲ್ಲಿ ಇಟ್ಟುಕೊಂಡಿರುತ್ತದೆ.
ಇಂತಿಪ್ಪ, ಈ ಸುದ್ದಿಯಲ್ಲಿ ಈಗ ಹೇಳಲು ಹೊರಟಿರುವ ವಿಷಯವೆಂದರೆ, ದಿ ಬೆಂಗಳೂರು ಮೋಟಾರ್ ಓನರ್ಸ್ & ಕನ್ಸುಮರ್ಸ್ ಕೋ - ಆಪರೇಟಿವ್ಸ್ ಸೊಸೈಟಿ. ಲಿ.ನಲ್ಲಿ ನಡೆದಿರುವ ಅಕ್ರಮ ಹಣ ದುರುಪಯೋಗದ ಬಗ್ಗೆ. ಈ ಸಂಘ ಸ್ಥಾಪನೆಯಾದಂದಿನಿಂದ ಏನೆಲ್ಲಾ ಅಕ್ರಮಗಳು ನಡೆದು ಎಷ್ಟೆಲ್ಲಾ ಹಣ ದುರುಪಯೋಗಗಳು ನಡೆದು ಹೋದವೋ ಗೊತ್ತಿಲ್ಲ. ಆದರೆ, 2009ರಿಂದ 2018-19 ನೇ ಸಾಲಿನವರೆಗೂ 14,76,93,719ಕೋಟಿ ರೂಪಾಯಿಗಳ ಅವ್ಯವಹಾರ ಕಂಡು ಬಂದಿದ್ದು ಈ ಕುರಿತ ದೂರನ್ನು ಸರ್ಕಾರದ ಗಮನಕ್ಕೆ ತರಲಾಗಿ ದಿನಾಂಕ 16.07.2022 ರಂದು ಸಹಕಾರ ಸಂಘ ಜಂಟಿ ನಿಬಂಧಕರಾಗಿದ್ದ ಶ್ರೀ ಅಶ್ವಥನಾರಾಯಣರವರು ಆದೇಶ ಒಂದನ್ನು ಹೊರಡಿಸಿದ್ದು (ಸ. ಅ. ಸಂ-ಸಿ.ಒ:71: ಸಿ. ಎಲ್. ಎಂ :2016) ಸದರಿ ಆದೇಶ ಪತ್ರದಲ್ಲಿ, ವಿಚಾರಣಾ ವರದಿಯಲ್ಲಿನ ಎರಡು ಆರೋಪಗಳಿಗೆ ಸಂಬಂಧಿಸಿದಂತೆ ಆಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡು ಆದೇಶ ತಲುಪಿದ 30 ದಿನದೊಳಗೆ ಅನು ಪಾಲನಾ ವರದಿಯನ್ನು ಸಂಬಂಧಪಟ್ಟ ಸೂಕ್ತ ದಾಖಲೆಗಳೊಂದಿಗೆ ಈ ಕಚೇರಿಗೆ ಸಲ್ಲಿಸುವಂತೆ ಸಂಘಕ್ಕೆ ನಿರ್ದೇಶನ ನೀಡಿರುತ್ತಾರೆ. ಇಷ್ಟೇ ಅಲ್ಲದೆ ಈ ಆದೇಶದ ಪ್ರತಿಯೊಂದಿಗೆ ವರ್ಷವಾರು ಹಣಕಾಸು ವರ್ಷ, ದುರುಪಯೋಗದ ಮೊತ್ತ ಮತ್ತು ಜವಾಬ್ದಾರರ ಕಾಲಂಗಳ ಸಮೇತ ವಿವರಗಳನ್ನು ನೀಡಿದ್ದು, ಸ. ಸಂ.ಕಾಯ್ದೆ 1959 ಕಲಂ 29 ಸಿ ಅನ್ವಯ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಅಧ್ಯಕ್ಷರನ್ನು ಅವರವರ ಸ್ಥಾನದಿಂದ ಅನರ್ಹಗೊಳಿಸಲು ಕ್ರಮವಿಡಲು ಸೂಚಿಸಿರುತ್ತದೆ ಮತ್ತು ಕಲಂ ಸಂಖ್ಯೆ 109 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೂಡ ಸೂಚಿಸಿರುತ್ತಾರೆ. ಮುಂದುವರೆದು ಸದರಿ ಅವಧಿಯಲ್ಲಿ ಸಂಘದ ಲೆಕ್ಕ ಪರಿಶೋಧನೆ ಜರುಗಿಸಿದ್ದ ಚಾರ್ಟರ್ಡ್ ಅಕೌಂಟರ್ಗಳಾದ ಶ್ರೀಮತಿ ರೇಖಾ, ಹನುಮಂತೇಗೌಡ ಮತ್ತು ಶ್ರೀ ಎನ್ ಕುಮಾರ್ ರವರನ್ನು ಕಪ್ಪು ಪಟ್ಟಿಗೆ ಸೇರಿಸಿ ಸಹಕಾರ ಪ್ರಾಧಿಕಾರಕ್ಕೆ ವರದಿ ನೀಡಲು ನಿರ್ದೇಶಿಸಿರುತ್ತಾರೆ. ಈ ಆದೇಶ ಅದೆಲ್ಲಿ ಎಕ್ಕುಟ್ಟಿ ಹೋಯಿತೋ ಗೊತ್ತಿಲ್ಲ. ಮುಂದುವರೆದು, 2019-20 ನೇ ಸಾಲಿನಲ್ಲಿ 2.64 ಕೋಟಿ ಮತ್ತು 2020-21 ನೇ ಸಾಲಿನಲ್ಲಿ 1.18 ಕೋಟಿ ಹಣ ದುರುಪಯೋಗ ಆಗಿರುವ ಕುರಿತು ಪುನಹ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲೇ ತಿಳಿದು ಬಂದಿದ್ದು ಈ ಕುರಿತು ಸಂಘದ ವತಿಯಿಂದ ಸರ್ಕಾರಕ್ಕೆ ದೂರೊಂದು ಸಲ್ಲಿಕೆ ಆಗುತ್ತೆ. ಆದರೆ ಈ ಬಾರಿ ದಿನಾಂಕ 27.06.2024ರಂದು ಆದೇಶವೊಂದನ್ನು ಹೊರಡಿಸಿದ ಸಹಕಾರ ಇಲಾಖೆಯವರು ಕರ್ನಾಟಕ ಸಹಕಾರ ಸಂಘ ಕಾಯಿದೆ 1959 ಕಲಂ 69ರಡಿ ತಾವೇ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿರುತ್ತಾರೆ.
ಆದರೆ ಇದುವರೆಗೂ ಪ್ರಕರಣ ದಾಖಲಿಸಿಕೊಂಡಿದ್ದಾಗಲೀ ಕ್ರಮ ಕೈಗೊಂಡಿದ್ದಾಗಲೀ, ಹಿಂದಿನ ಜಂಟಿ ನಿರ್ದೇಶಕರ ಆದೇಶ ಪಾಲಿಸಿದ್ದಾಗಲಿ ಕಂಡುಬಂದಿರುವುದಿಲ್ಲ. ಹಾಗೇ ಇಂದಿನ ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳು ಯಾರೂ ಕೂಡ ಭ್ರಷ್ಟಾಚಾರವನ್ನು ಹತ್ತಿಕ್ಕಲು, ವಸೂಲಾತಿಗೆ ಮುಂದಾಗಲು ಕಾಳಜಿ ವಹಿಸದೆ ನರ ಸತ್ತವರಂತೆ ಕೂತಿದ್ದಾರೆ. ಹೀಗಾಗಿ ಸದ್ಯಕ್ಕೆ ಠೇವಣಿದಾರರ ನಷ್ಟವನ್ನು ತುಂಬಿ ಕೊಡುವುದು, ಸಂಘಕ್ಕೆ ಅಂಟಿರುವ ಕಪ್ಪು ಮಚ್ಚೆಯನ್ನು ಹೊರೆಸಿ ಹಾಕುವ ಯಾವುದೇ ಬೆಳವಣಿಗೆಗಳು ನಡೆಯುತ್ತವೆಂಬ ಆಶಾ ಭಾವನೆ ಕಾಣಬರುವುದಿಲ್ಲ. ಏಕೆಂದರೆ ಈ ಬಹುಕೋಟಿ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವವರು ಬೇರಾರು ಅಲ್ಲದೆ ಮಾಜಿ ಅಧ್ಯಕ್ಷರಾದ ಷಣ್ಮುಗಪ್ಪ, ಚೆನ್ನಾರೆಡ್ಡಿ ಮತ್ತು ಕಾರ್ಯದರ್ಶಿಯಾದ ಎಸ್ ನಾಗಪ್ಪ, ಅನಿಲ್ ಕುಮಾರ್ ಮತ್ತು ಲೆಕ್ಕಿಗ ಸತೀಶ್ ಕುಮಾರ್ ರೆಡ್ಡಿ ರವರುಗಳೇ ಆಗಿದ್ದಾರೆ. ಹಾಗಾಗಿ ಬೇಲಿಯೇ ಎದ್ದು ಹೊಲ ಮೇಯ್ದರೆ ಅಂದ ಹಾಗಾಗಿದೆ ಕಥೆ So,
ಈ ಬಹುಕೋಟಿಯ ಅವ್ಯವಹಾರವು ಆಡಿಟ್ ವರದಿಯಲ್ಲಿ ಬಹಿರಂಗಗೊಂಡಿದ್ದರೂ, ಮೇಲ್ನೋಟಕ್ಕೆ ಇಷ್ಟೊಂದು ಭ್ರಷ್ಟಾಚಾರ ಕಂಡು ಬರುತ್ತಿದ್ದರೂ ಸದರಿ ಸಂಘಕ್ಕೆ ಅಧ್ಯಕ್ಷ, ನಿರ್ದೇಶಕ, ಪದಾಧಿಕಾರಿಗಳೆಲ್ಲರೂ ವಂದಿಮಾಗದರಂತೆ ಮುಂದೆ ನಿಂತಿದ್ದರೂ ಸದ್ಯಕ್ಕೆ ನ್ಯಾಯ ಸಿಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಹಾಗಾಗಿ, ಸರ್ಕಾರವೇ ಮುಂದೆ ನಿಂತು ಈ ಭ್ರಷ್ಟಾಚಾರದ ತನಿಖೆ ವಹಿಸಿಕೊಂಡು ತಪ್ಪಿತಸ್ಥರ ಎಡೆಮುರಿ ಕಟ್ಟಲು ಎಲ್ಲಾ ಹಿತಾಸಕ್ತ ಸದಸ್ಯರು ಹಾಗೂ ನಷ್ಟ ಹೊಂದಿರುವ ಠೇವಣಿದಾರರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅತಿ ಶೀಘ್ರ ಸರ್ಕಾರ ಯಾವುದೇ ಕಾಳಜಿ ತೋರಿಸದೆ ಇದ್ದಲ್ಲಿ ಇದೇ ನಮ್ಮ ಪತ್ರಿಕೆಯಲ್ಲಿ ಇನ್ನಷ್ಟು ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತೊಡಗಿಸಿಕೊಂಡಿರುವವರ ಕುರಿತು ನಿಖರ ವರದಿಯನ್ನು ಮಾಡಿ ಹೋರಾಟಕ್ಕೆ ಆಣಿಯಾಗುತ್ತೇವೆಂದು ಎಚ್ಚರಿಕೆ ನೀಡುತ್ತಿದ್ದೇವೆ.
comments
Log in to write reviews