ಹೊಳಲ್ಕೆರೆ: ಕೆಂಚಾಪುರದ ಹೊಸಕೆರೆಯ ಕಳಪೆ ಕಾಮಗಾರಿ
2024-10-13 07:41:38
ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ ಕೆಂಚಾಪುರ ಗ್ರಾಮದ ಗುಡ್ಡದ ಜಾನೇ ರಂಗನಾಥಸ್ವಾಮಿ ಬೆಟ್ಟದ ಕೋಳಿ ಕಲ್ಲಿನ ಹತ್ತಿರದ 2 ಜೋಡಿ ಗುಡ್ಡಗಳಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ 2018-19 ನೇ ಸಾಲಿನಲ್ಲಿ ನಿರ್ಮಿಸಿರುವ ಹೊಸಕೆರೆಯು ಹೊಳಲ್ಕೆರೆ ತಾಲೂಕಿನಲ್ಲೇ ಅತ್ಯಂತ ಕಳಪೆ ಕಾಮಗಾರಿಯಾಗಿದೆ. ಈ ಕಾಮಗಾರಿಗೆ ಸುಮಾರು 80 ಲಕ್ಷ ಖರ್ಚು ಮಾಡಿರುತ್ತಾರೆ. ಗುಡ್ಡದ ಮಣ್ಣನ್ನೇ ಹೊಡೆದು 15 ಅಡಿ ಏರಿ ಎತ್ತರಿಸಿ 2 ಅಡಿ ಕೋಡಿ ನಿರ್ಮಿಸಿದ್ದಾರೆ. ಈ ಹೊಸಕೆರೆಯಲ್ಲಿ ಕೇವಲ 2 ಅಡಿ ಮಾತ್ರ ನೀರು ನಿಂತಿದೆ. ಈಗ ನಿರ್ಮಿಸಿರುವ ಕೆರೆ ಏರಿಯು ಬಸಿಯುತ್ತಿರುವುದರಿಂದ ಸುಮಾರು 80 ಲಕ್ಷ ರೂ.ಗಳು ನೀರಲ್ಲಿ ಹೋಮ ಮಾಡಿದಂತಾಗಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿದ್ದಾರೆ. ಏರಿ ಬಸಿಯುವುದನ್ನ ನಿಲ್ಲಿಸಿ ಕೆರೆ ಏರಿ ಮತ್ತು ಕೋಡಿ ಎತ್ತರಿಸಬೇಕು ಮತ್ತು ಈ ಕೆರೆಯು ಮಳೆ ಚೆನ್ನಾಗಿ ಬಂದರೆ ಪ್ರತೀ ವರ್ಷ 2 ಅಡಿ ಕೂಡ ಈ ಕೆರೆಯಲ್ಲಿ ನೀರು ನಿಲ್ಲದೇ ಕೆಂಚಾಪುರ, ದೇವರ ಹೊಸಹಳ್ಳಿ, ತಾಳಿಕಟ್ಟೆ ಮೂಲಕ ಹರಿದು ಸೂಳೆಕೆರೆ ಸೇರುತ್ತಿದೆ. ಜನಪ್ರತಿನಿಧಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಈ 2 ಗುಡ್ಡಗಳಿಗೆ ಅಡ್ಡಲಾಗಿ ಮಿನಿ ಡ್ಯಾಂ ನಿರ್ಮಾಣ ಮಾಡಿದರೆ ಸುತ್ತಮುತ್ತಲಿನ ಗ್ರಾಮಗಳಾದ ಕೆಂಚಾಪುರ, ದೇವರ ಹೊಸಹಳ್ಳಿ, ತಾಳಿಕಟ್ಟೆ, ಆರ್,ಡಿ,ಕಾವಲ್, ತಾಳಿಕಟ್ಟೆ, ತುಪ್ಪದಹಳ್ಳಿ ಮುಂತಾದ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ಕೆಂಚಾಪುರ ಗ್ರಾಮದ ರೈತ ಮುಖಂಡರಾದ ಸಾಲುಮನೆ ಜಯದೇವಪ್ಪ, ಆನಂದಪ್ಪ, ದೇವರಮನೆ ಉಮೇಶ್, ಉಜ್ಜಿನಪ್ಪ, ಬಸವರಾಜ್, ಹರೀಶ್, ಮುದ್ವೀರಪ್ಪರ ನಾಗರಾಜು, ರಾಕೇಶ್, ಅಪ್ಪಿ, ಕಿರಣ, ಅಜಯ್ ಅವರು ಒತ್ತಾಯಿಸಿದ್ದಾರೆ.
comments
Log in to write reviews