ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಒತ್ತಾಯ

ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಒತ್ತಾಯ

2024-11-12 08:18:37

ಚಿತ್ರದುರ್ಗ : ರಾಜ್ಯದಲ್ಲಿ ಬಹಳ ಹಿಂದುಳಿದ ಸಮುದಾಯವಾದ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗದ ಶ್ರೀ ಕ್ಷೇತ್ರ ಗೊಲ್ಲಗಿರಿ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮಿಜಿ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ‌.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಟಿ.ಬಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ಈರಲಿಂಗೇಶ್ವರ ಸ್ವಾಮಿ ದೇವರ ನೂತನ ದೇವಸ್ಥಾನ ನಿರ್ಮಾಣದ ಅಡಿಪಾಯ ಪೂಜೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

"ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕತೆಯಿದೆ. ಈಗಾಗಲೇ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಡುಗೊಲ್ಲ ಕಡತಗಳಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯಸರ್ಕಾರ, ಕಡತವನ್ನು ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡಬೇಕು, ಈ ಮೂಲಕ ಮುಖ್ಯಮಂತ್ರಿಗಳು ನಮ್ಮ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು  ಕೇಂದ್ರಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಒತ್ತಾಯಿಸಿದರು.

"ದೇಶದ ಪರಂಪರೆಯಲ್ಲಿ ದೇವಸ್ಥಾನಗಳಿಗೆ ತನ್ನದೇ ಆದಂತಹ ಸ್ಥಾನಮಾನವಿದೆ. ಅದರಲ್ಲೂ ಕೂಡ ಕಾಡುಗೊಲ್ಲರು ಅನಾದಿ ಕಾಲದಿಂದಲೂ ದೇವರುಗಳಿಗೆ ಅತ್ಯಂತ ಭಕ್ತಿ ಮತ್ತು ಗೌರವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ನಾವು ಸಾಂಸ್ಕೃತಿಕ ವೀರರನ್ನೇ ದೇವರನ್ನಾಗಿ ಆರಾಧಿಸುವ ಪದ್ದತಿ ರೂಢಿಯಲ್ಲಿದೆ. ನಾವು ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದೇವೆ. ಟಿ.ಬಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ಈರಣ್ಣಸ್ವಾಮಿ ದೇವರಿಗೆ ಆದಿ ಪೂಜೆ ನೆರವೇರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ವೇಗವಾಗಿ ಆರಂಭಗೊಂಡು, ದೇವಾಲಯ ಪೂರ್ಣಗೊಂಡು ಲೋಕಾರ್ಪಣೆಯಾಗಲಿ, ಈ ಮೂಲಕ ಆ ಭಗವಂತ ಎಲ್ಲರಿಗೂ ಒಳಿತು ಮಾಡಲಿ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ದೇವರ ಪೂಜಾರಿ, ಪೋತರಾಜ್, ಚಿಕ್ಕಣ್ಣ, ಬುಕ್ಕಾಪಟ್ಟಣ ಕ್ಯಾತೆದೇವರ ಪೂಜಾರಿ, ದೊಡ್ಡಯ್ಯ, ಮಾಯಸಂದ್ರ ಚಿತ್ರಲಿಂಗೇಶ್ವರ ಪೂಜಾರಿ ಪೂಜಪ್ಪ, ಮ್ಯಾಕ್ಲೂರಹಳ್ಳಿ ಬಾಲಕೃಷ್ಣ, ದೇವರ ಪೂಜಾರಿ ರಂಗಪ್ಪ, ಹೊಸಹಟ್ಟಿ ರಂಗನಾಥಸ್ವಾಮಿ ಪೂಜಾರಿ, ರಂಗಪ್ಪ, ಬ್ಯಾಡರಹಳ್ಳಿ ಪೂಜಾರಿ, ಗೋಪಾಲಕೃಷ್ಣ, ಓಣಿಹಟ್ಟಿ ಪೂಜಾರಿ, ಯಳಿಯಪ್ಪ, ರಂಗನಾಥನ ಪೂಜಾರಿ, ಲಕ್ಷ್ಮಣಪ್ಪ, ಮಸ್ಕಲ್ ಚಿತ್ರದೇವರ ಪೂಜಾರಿ, ನಿಜಲಿಂಗಪ್ಪ, ಜೋಗಯ್ಯನಪಾಳ್ಯ ಶನಿದೇವರ ಪೂಜಾರಿ, ಮಹಾಲಿಂಗಯ್ಯ, ದೇವರಕೊಟ್ಟ ದತ್ತಪೀಠದ ಮುದ್ದರಂಗಪ್ಪಸ್ವಾಮಿ, ಮಸ್ಕಲ್ ವೀರೇಗೌಡ್ರು, ಧನಂಜಯ, ಮಲ್ಲಣ್ಣ, ಪೂಜಾರಿ ನರಸಿಂಹಣ್ಣ, ವೆಂಕಟೇಶ್ , ಶಿರಾದ ತಾವರೆಕೆರೆ ಗೊಲ್ಲರಹಟ್ಟಿಯ ಅಣ್ಣತಮ್ಮಂದಿರು, ಮಸ್ಕಲ್, ಚಿತ್ರದೇವರಹಟ್ಟಿ ಹಾಗೂ ಟಿ.ಬಿ ಗೊಲ್ಲರಹಟ್ಟಿ ಗ್ರಾಮಸ್ಥರು, ಕಾಡುಗೊಲ್ಲರ ಕಟ್ಟೆಮನೆಗಳ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.

author single

L Ramprasad

Managing Director

comments

No Reviews