ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಖಾಸಗಿ ದೂರು ದಾಖಲು!
2024-09-13 08:08:54
ಬೆಂಗಳೂರು, ಸೆ.13: ಸಿಎಂ ಸಿದ್ಧರಾಮಯ್ಯ ವಿರುದ್ಧ ಎನ್.ಆರ್.ರಮೇಶ್ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮತ್ತೊಂದು ಖಾಸಗಿ ದೂರು ದಾಖಲಿಸಿದ್ದಾರೆ.
ಬಿಬಿಎಂಪಿಗೆ ಉದ್ದೇಶಪೂರ್ವಕವಾಗಿ 68 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ವಂಚಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ತಿಳಿಸಿದ್ದಾರೆ.
2015-2017 ರ 2 ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯ 493 ಬಸ್ ಷೆಲ್ಟರ್ ಗಳನ್ನು ತಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, 68 ಕೋಟಿ ರೂ.ಗಳಲ್ಲಿ ನಯಾಪೈಸೆಯಷ್ಟೂ ಜಾಹಿರಾತು ಶುಲ್ಕ ಪಾವತಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳ ಸಹಿತ ದೂರುಗಳನ್ನು ದಾಖಲಿಸಲಾಗಿತ್ತು.
ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲಾದ ನಂತರ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿಯ ಅಂದಿನ ವಿಶೇಷ ಆಯುಕ್ತರು 12 ಕೋಟಿ ರೂ. ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಡಿಮ್ಯಾಂಡ್ ನೋಟೀಸ್ ಅನ್ನು ನೀಡಿದ್ದರು.
ಆದರೂ ಸಹ ಸಿದ್ದರಾಮಯ್ಯ ಸರ್ಕಾರ ಈ ನೋಟೀಸ್‌ಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿರಲಿಲ್ಲ. ಸಿದ್ದರಾಮಯ್ಯ ನವರು 2ನೇ ಬಾರಿ ಸಿಎಂ ಆದ ನಂತರ, ಅವರ ಪ್ರಭಾವ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಲೋಕಾಯುಕ್ತ ಪೋಲೀಸರು, ಸಿದ್ದರಾಮಯ್ಯ ಸರ್ಕಾರವು ಬಿಬಿಎಂಪಿಗೆ 68,14,90,236 ರೂ.ಗಳಷ್ಟು ಜಾಹೀರಾತು ಶುಲ್ಕವನ್ನು ವಂಚಿಸಿದ್ದ ಹಗರಣಕ್ಕೆ ಸಂಬಂಧಿಸಿದಂತೆ ನಾನು ನೀಡಿದ್ದ ದೂರನ್ನು ಯಾವುದೇ ಸೂಚನೆ ಇಲ್ಲದೆಯೇ ಮುಕ್ತಾಯಗೊಳಿಸಿತ್ತು.
ಈ ಮಹಾ ವಂಚನೆಯ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಸಹಿತವಾಗಿ ದೂರನ್ನು ನೀಡಿದ್ದರೂ ಕೂಡ ಪಕ್ಷಪಾತ ಧೋರಣೆಯಿಂದ ಮತ್ತು ಸಿಎಂ ಸಿದ್ದರಾಮಯ್ಯನವರ ಒತ್ತಡಕ್ಕೆ ಒಳಗಾಗಿ ಸದರಿ ಪ್ರಕರಣವನ್ನು ಮುಕ್ತಾಯಗೊಳಿಸಿರುವ ಲೋಕಾಯುಕ್ತ ಪೋಲೀಸರ ನಡೆಯನ್ನು ವಿರೋಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಖಾಸಗಿ ದೂರನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
comments
Log in to write reviews