ದೇಶಾದ್ಯಂತ ಇಂದು ‌ವೈದ್ಯರ ಮುಷ್ಕರ: ಆಸ್ಪತ್ರೆಗಳಲ್ಲಿ ಓಪಿಡಿ ಬಂದ್!

ದೇಶಾದ್ಯಂತ ಇಂದು ‌ವೈದ್ಯರ ಮುಷ್ಕರ: ಆಸ್ಪತ್ರೆಗಳಲ್ಲಿ ಓಪಿಡಿ ಬಂದ್!

2024-08-17 09:41:45

ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಖಂಡಿಸಿ ವೈದ್ಯರು ಇಂದು ದೇಶಾದ್ಯಂತ ಬಂದ್ ಗೆ ಕರೆ ಕೊಟ್ಟು ಆಸ್ಪತ್ರೆಗಳಿಗೆ ತೆರಳದೆ ಮುಷ್ಕರ ಹೂಡಿದ್ದಾರೆ.
ಇದರಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೋಗಿಗಳಿಗೆ ತಟ್ಟಿದ ವೈದ್ಯರ ಪ್ರತಿಭಟನೆ ಬಿಸಿ ತಟ್ಟಿದೆ.
ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಡಯಾಲಿಸಿಸ್​ಗಾಗಿ ಬಂದಿದ್ದ ಹಲವು ರೋಗಿಗಳು ವಾಪಸ್​ ಆಗುತ್ತಿದ್ದಾರೆ. ಗೊರವನಹಳ್ಳಿ, ಹನುಮಂತನಗರದಿಂದ ಬಂದಿದ್ದ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಸಿಗದೆ ವಾಪಸ್​ ತೆರಳ್ತಿದ್ದಾರೆ. ಚಿಕಿತ್ಸೆ ಸಿಗದ ಹಿನ್ನೆಲೆ ಬೇಸರ ಹೊರಹಾಕಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ವೈದ್ಯರಿಂದ ಪ್ರತಿಭಟನೆ..

ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಖಂಡಿಸಿ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ವೈದ್ಯರಿಂದ ಪ್ರತಿಭಟನೆ
ನಡೆಯಲಿದೆ. ಚಾಮರಾಜಪೇಟೆಯ ಐಎಂಎ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಕಿದ್ವಾಯಿ, ಜಯದೇವ, ಬೌರಿಂಗ್ ವೈದ್ಯರಿಂದಲೂ ಹೋರಾಟ ನಡೆಯಲಿದೆ. ನಿಮ್ಹಾನ್ಸ್​​ನಲ್ಲಿ ಕಳೆದ 5 ದಿನಗಳಿಂದ ವೈದ್ಯರ ಪ್ರತಿಭಟನೆ ನಡೆಯುತ್ತಿದೆ.

ಇಂದು ಯಾವೆಲ್ಲ ಸೇವೆಗಳು ಲಭ್ಯ, ಏನೆಲ್ಲ ಇರಲ್ಲ?

ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಿರಲಿದೆ. ವೈದ್ಯರ ಪ್ರತಿಭಟನೆಯ ಕಾರಣ ರಾಜ್ಯದ ಆಸ್ಪತ್ರೆಗಳಲ್ಲಿ ಏನೇನು ಲಭ್ಯವಿರಲಿದೆ, ಯಾವ ಸೇವೆ ದೊರೆಯುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶದಲ್ಲಿ ವೈದ್ಯರ ಪ್ರತಿಭಟನೆ
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ವಿಧ್ಯಾರ್ಥಿಯ ಅತ್ಯಾಚಾರ-ಕೊಲೆಯನ್ನು ವಿರೋಧಿಸಿ ಇಂದೋರ್‌ನಲ್ಲಿ ವೈದ್ಯರು ಕ್ಯಾಂಡಲ್ ಮಾರ್ಚ್ ನಡೆಸಿದರು.

ಮಮತಾ ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಆರ್​ಜಿ ಕರ್ ಆಸ್ಪತ್ರೆಗೆ ಭದ್ರತೆಯನ್ನ ನೀಡಲಾಗದಿದ್ದರೆ ನಾವೇ ಮುಚ್ಚಿಸುತ್ತೇವೆ. ಪೊಲೀಸ್ ವೈಫಲ್ಯಕ್ಕೆ ಹೈಕೋರ್ಟ್ ಜಡ್ಜ್ ಕೆಂಡವಾಗಿದ್ದಾರೆ. ಇದು ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ ಎಂದು ಕೊಲ್ಕತ್ತಾ ಹೈಕೋರ್ಟ್ ಕಿಡಿಕಾರಿದೆ.

25ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಕೋಲ್ಕತ್ತಾ ವೈದ್ಯೆ ಹತ್ಯೆ ವಿರುದ್ಧ ಆರ್​ಜಿ ಕರ್ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 25ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ಟು 6 ಆರೋಪಿಗಳನ್ನ ಸೇಲಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಲವು ಶಂಕಿತರ ಫೋಟೋ ರಿಲೀಸ್ ಮಾಡಲಾಗಿದೆ. ಮತ್ತಷ್ಟು ಜನರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿದ್ಯಾರ್ಥಿನಿ ಹತ್ಯೆ ವಿಚಾರದಲ್ಲಿ ರಾಜಕೀಯ ಜಟಾಪಟಿ

ಕೋಲ್ಕತ್ತದ ಆರ್​ಜಿ ಕರ್ ಆಸ್ಪತ್ರೆ ವಿರುದ್ಧ ಆಕ್ರೋಶ ಸ್ಪೋಟವಾಗಿದೆ. ಬಿಜೆಪಿ ಕಾರ್ಯಕರ್ತರು ವೈದ್ಯರ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯಾರಿಕೇಡ್​ಗಳನ್ನ ತಳ್ಳಿ ಮಹಿಳಾ ಕಾರ್ಯಕರ್ತೆಯರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನಾ ನಿರತರನ್ನ ತಡೆಯಲು ಪೊಲೀಸರು ಹರಸಾಹಸವನ್ನ ಪಟ್ಟಿದ್ದಾರೆ. ಇನ್ನೊಂದ್ಕಡೆ ಆರ್​ಜಿ ಕರ್ ಆಸ್ಪತ್ರೆ ಮೇಲೆ ನಡೆಸಿರೋ ದಾಳಿ ಹಿಂದೆ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರು ಇದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ದೇಶಾದ್ಯಂತ ನ್ಯಾಯಕ್ಕಾಗಿ ಮುಂದುವರಿದ ಹೋರಾಟ
ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಉತ್ತರಪ್ರದೇಶದ ಐಎಂಎ ಸಿಬ್ಬಂದಿ ಮತ್ತು ವೈದ್ಯರು, ಸಿಬ್ಬಂದಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. 

ತಮಿಳುನಾಡಿನಲ್ಲೂ ವೈದ್ಯರ ಪ್ರತಿಭಟನೆ

ತಮಿಳುನಾಡಿನ ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾಂಡಲ್ ಹಚ್ಚಿ ವೈದ್ಯರು ಪ್ರತಿಭಟನೆ ಮಾಡಿದ್ದಾರೆ. ನ್ಯಾಯಕ್ಕಾಗಿ ವೈದ್ಯರ ಹೋರಾಟ ಎಲ್ಲೆಲ್ಲೂ ಭುಗಿಲೆದ್ದಿದೆ.

ರಾಜ್ಯದ ಎಲ್ಲಾ ಕ್ಲಿನಿಕ್​ಗಳು ಬಂದ್!

ರಾಜ್ಯದ ಎಲ್ಲಾ ಕ್ಲಿನಿಕ್​ಗಳು ಬಂದ್ ಆಗುತ್ತವೆ ಅಂತಾ IMA ರಾಜ್ಯ ಕಾರ್ಯದರ್ಶಿ ಡಾ. ಕರುಣಾಕರ್ ಹೇಳಿದ್ದಾರೆ. ಈ ಬಗ್ಗೆ ಜೊತೆ ಮಾತನಾಡಿದ ಅವರು, ಈಗಾಗಲೇ ಕ್ಲಿನಿಕ್​ಗಳ ವೈದ್ಯರೂ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಸಾರ್ವಜನಿಕರಿಗೆ ತೊಂದ್ರೆ ಆಗ್ಬಾರ್ದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಅಸೋಸಿಯೇಷನ್ ಜೊತೆ ನಾನು ಸಭೆ ಕರೆದಿದ್ದೇನೆ. ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸೋಕೆ ಹೇಳಿದ್ದೇನೆ ಎಂದು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು (ಆಗಸ್ಟ್​.17) ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸಲು ವೈದ್ಯರು ಮುಂದಾಗಿದ್ದಾರೆ. ಆರ್ ಜಿ ಕರ್​ ಆಸ್ಪತ್ರೆ ಬಳಿ ಪ್ರತಿಭಟನೆ ಮುಂದುವರಿದಿದೆ. ದೇಶಾದ್ಯಂತ ವೈದ್ಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ದೇಶಾದ್ಯಂತ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ವೈದ್ಯರು ಕರೆ ನೀಡಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಸೇವೆ ಬಂದ್ ಮಾಡಲಾಗುತ್ತೆ. ದೇಶಾದ್ಯಂತ 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ಬಂದ್ ಆಗಿರಲಿದೆ.

ಇನ್ನು ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆ ಕಾಲ OPD ಬಂದ್ ಆಗಿರಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೇವೆ ಕ್ಲೋಸ್ ಆಗಿರಲಿದೆ ಎಂದು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ತಿಳಿಸಿದ್ದಾರೆ. ಎಮರ್ಜೆನ್ಸಿ ಓವರ್​​ಫ್ಲೋ ಆದ್ರೂ ಅದನ್ನು ನಾವು ನಿಭಾಯಿಸುತ್ತೇವೆ. ಕಪ್ಪುಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆ ಮಾತ್ರ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

author single

L Ramprasad

Managing Director

comments

No Reviews