ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಹೊಡೆಯುವರಿಗಿಂತ ನೋಡಿದವರಿಗೇ ಹೆಚ್ಚು ಗಾಯ!
2024-11-01 10:28:44
ಬೆಂಗಳೂರು, ನವೆಂಬರ್ 1: ದೀಪಾವಳಿ ಹಬ್ಬ ಆಚರಿಸೋ 3 ದಿನಗಳ ಕಾಲ ಮನೆಗಳಲ್ಲಿ ದೀಪಗಳನ್ನ ಹಚ್ಚಲಾಗುತ್ತದೆ. ಜೊತೆಗೆ ಸದ್ದು ಮಾಡುವ ಪಟಾಕಿ ಕೂಡಾ ಇರ್ಲೇ ಬೇಕು. ಚಿಕ್ಕಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡಾ ಈ 3 ದಿನಗಳ ಕಾಲ ಪಟಾಕಿ ಸಿಡಿಸಿ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಪಟಾಕಿ ಹೊಡೆಯೋ ಮುನ್ನಾ ವಹಿಸಬೇಕಾದ ಮುಂಜಾಗೃತ ಕ್ರಮವನ್ನ ಮಾತ್ರ ಯಾರು ಅನುಸರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ(ಅಕ್ಟೋಬರ್ 31) ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡಿರುವವರ ಪ್ರಕರಣಗಳು ಹೆಚ್ಚಾಗಿವೆ.
ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಒಂದೇ ದಿನಕ್ಕೆ ಸುಮಾರು 20 ಪ್ರಕರಣಗಳು ದಾಖಲಾಗಿವೆ. ಬಿಜಿಲಿ ಪಟಾಕಿ, ಲಕ್ಷ್ಮೀ ಬಾಂಬ್ ಸೇರಿದಂತೆ ವಿವಿಧ ಬಗೆಯ ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡವರು ಹೆಚ್ಚು. ಅದ್ರಲ್ಲೂ ಮಕ್ಕಳು ಹೆಚ್ಚು ಆಸ್ಪತ್ರೆಗೆ ದಾಖಲಾಗ್ತಿರೋದು ಮತ್ತಷ್ಟು ಆತಂಕಕ್ಕೆ ದಾರಿಮಾಡಿಕೊಟ್ಟಿದೆ. ಇದರಲ್ಲಿ ಒಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದು, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗ್ತಿದೆ. ಇನ್ನುಳಿದವರಿಗೆ ಕಡಿಮೆ ಗಾಯವಾಗಿದ್ದು, ಮಿಂಟೋ ಪಟಾಕಿ ಸಿಡಿತ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪಟಾಕಿ ಸಿಡಿಸುವವರಿಗೆ ಸಾಮಾನ್ಯವಾಗಿ ಗಾಯವಾಗುತ್ತೆ ಅನ್ನೋದು ಇತ್ತು. ಆದ್ರೆ ಈ ಬಾರಿ ರಸ್ತೆಯಲ್ಲಿ ಓಡಾಡೋರಿಗೆ ಹಾಗೂ ಪಟಾಕಿ ಹೊಡೆಯೋದನ್ನ ನಿಂತು ನೋಡುವವರಿಗೆ ಹೆಚ್ಚು ಗಾಯಗಳಾಗಿರೋದು ಕಂಡುಬಂದಿದೆ. ಆಸ್ಪತ್ರೆಯಲ್ಲಿ ಪಟಾಕಿ ಸಿಡಿತಗೊಂಡವರನ್ನ ನೋಡಿದಾಗ ಶೇ. 70 ರಷ್ಟು ಪಟಾಕಿ ಸಿಡಿಸದವರಿಗೆ ಗಾಯಗಳಾಗಿದೆ.
ನಗರದ ನಾರಾಯಣ ನೇತ್ರಾಲಯದಲ್ಲಿ ಸುಮಾರು 14 ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಮಕ್ಕಳೇ ಆಗಿದ್ದಾರೆ. ಜೊತೆಗೆ 30 ವರ್ಷದ ವ್ಯಕ್ತಿಗೆ ನಿಂತಿದ್ದಾಗ ಪಟಾಕಿ ಸಿಡಿದು, ಕಣ್ಣಿನ ಹೊರಭಾಗಕ್ಕಿಂತ, ಒಳಗಡೆ ಗಾಯವಾಗಿ ರೆಟಿನಾ ಹೊರ ಬಂದಿದೆ. ಜೊತೆಗೆ ಒಂದು ಮಗುವಿಗೂ ಕೂಡಾ ಪಟಾಕಿ ಹೊಡೆಯೋದನ್ನ ನೋಡೋಕೆ ಹೋದಾಗ ರೆಟಿನಾ ಸಮಸ್ಯೆಯಾಗಿದೆ. ಜೊತೆಗೆ ರಾಕೆಟ್‌ನಿಂದಲೂ ಮತ್ತೊಬ್ಬ ವ್ಯಕ್ತಿಗೆ ಗಾಯವಾಗಿದೆ. ಈ ಹಿನ್ನೆಲೆ ಇವರಿಗೆ ಮತ್ತೆ ದೃಷ್ಟಿ ಬರೋದು ಬಹಳ ಅನುಮಾನವಾಗಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ಗ್ಲಾಸ್ ಹಾಕುವುದು ಹಾಗೂ ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿ, ಕತ್ತಲನ್ನ ಕಳೆಯುವ ಬದಲು. ಅನೇಕರ ಬಾಳಿನಲ್ಲಿ ದೃಷ್ಟಿಯನ್ನೇ ತೆಗೆದುಬಿಟ್ಟಿದೆ. ಈ ಹಿನ್ನೆಲೆ ಪಟಾಕಿ ಸಿಡಿಸುವವರು ತಮ್ಮ ಅಕ್ಕಪಕ್ಕ ನೋಡಿ ಎಚ್ಚರಿಕೆಯಿಂದ ಪಟಾಕಿ ಹೊಡೆದರೆ ಒಳಿತು.
comments
Log in to write reviews