ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಘೋಷಣೆ!
2024-09-15 01:28:45
ದೆಹಲಿ, ಸೆ.15: ಹೌದು, ಇದು ದೇಶಾದ್ಯಂತ ಇರುವ ಎಎಪಿ ಪಕ್ಷದ ಕಾರ್ಯಕರ್ತರಿಗೆ ಭಾರಿ ಶಾಕಿಂಗ್ ನ್ಯೂಸ್. ಕಳೆದ 2 ದಿನಗಳ ಹಿಂದಷ್ಟೇ ಅಬಕಾರಿ ನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು. ಆದರೆ ಈ ಷರತ್ತುಬದ್ಧ ಜಾಮೀನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಷ್ಟವಾಗಿಲ್ಲ. ಏಕೆಂದರೆ ಮುಖ್ಯಮಂತ್ರಿಯಾಗಿದ್ದರೂ ತಾವು ಸುಪ್ರೀಂಕೋರ್ಟ್ ಷರತ್ತಿನಂತೆ ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ ಮತ್ತು ಅಲ್ಲಿ ಯಾವುದೇ ಸರ್ಕಾರಿ ಕಡತಗಳಿಗೆ ಮುಖ್ಯಮಂತ್ರಿಯಾಗಿ ಸಹಿ ಹಾಕುವಂತಿಲ್ಲ. ಈ ಷರತ್ತುಗಳನ್ನು ಪೂರೈಸಲು ಜನಪ್ರಿಯ ಮುಖ್ಯಮಂತ್ರಿ ಎನಿಸಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಅಸಾಧ್ಯ ಎಂದೆನಿಸಿದೆ. ಆದ್ದರಿಂದಲೇ ಇದೀಗ ಸ್ವತಃ ತಾವೇ ಸ್ವಯಂಪ್ರೇರಿತರಾಗಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ.
ಬರೋಬ್ಬರಿ 6 ತಿಂಗಳಿನಿಂದ ಅಬಕಾರಿ ನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೂ ರಾಜೀನಾಮೆ ನೀಡದೆ ದೆಹಲಿಯ ತಿಹಾರ್ ಜೈಲಿನಲ್ಲೇ ಕೂತು ಅಧಿಕಾರ ನಡೆಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊನೆಗೂ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ದೆಹಲಿಯ ಎಎಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಎಎಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ತಾವು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೆರಡು ದಿನಗಳಲ್ಲಿ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು.
ಭಾಷಣ ಮುಂದುವರೆಸಿದ ಕೇಜ್ರಿವಾಲ್, 'ನಾನು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಎಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂದು ಎಎಪಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ದೆಹಲಿಯ ನೂತನ ಮುಖ್ಯಮಂತ್ರಿ ಯಾರೆಂದು ಅಧಿಕೃತವಾಗಿ ಘೋಷಿಸಲಾಗುವುದು' ಎಂದು ತಿಳಿಸಿದರು.
comments
Log in to write reviews