ದರ್ಶನ್ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ: ವೈದ್ಯಕೀಯ ವರದಿಯಲ್ಲಿ ಬಹಿರಂಗ
2024-10-28 07:23:00
ಬೆಂಗಳೂರು, ಅ.28: ನಟ ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಇದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ತಪಾಸಣೆ ಮಾಡಿಸಲಾಗಿದೆ. ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ನೀಡಿ, ದರ್ಶನ್ ಪರ ವಕೀಲರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಇಂದು (ಅಕ್ಟೋಬರ್ 28) ಹೈಕೋರ್ಟ್ನಲ್ಲಿ ನಡೆದಿದೆ. ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ಮಾಡಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ದರ್ಶನ್ ಅವರ ವೈದ್ಯಕೀಯ ವರದಿ ನೀಡಲಾಯಿತು. ವರದಿಯ ಪ್ರತಿ ನೀಡಲು ನಿರ್ದೇಶಿಸುವಂತೆ ಎಸ್ಪಿಪಿ ಮನವಿ ಮಾಡಿದರು. ಮಂಗಳವಾರ (ಅ.29) ಮಧ್ಯಾಹ್ನ 2.30ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜಾಮೀನು ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅನಾರೋಗ್ಯ ಕಾಡುತ್ತಿರುವುದರಿಂದ ಅವರಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಮನವಿ ಮಾಡಿದ್ದಾರೆ.
‘ಎಂಆರ್ಐ, ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ನ್ಯೂರೋ ಸರ್ಜನ್ ಮೂರು ಅಂಶ ಹೇಳಿದ್ದಾರೆ. ನಂಬ್ನೆಸ್ ಇದೆ. ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದ ಕಿಡ್ನಿಗೆ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ ಆಗಬಹುದು. ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್ಗೆ ಸೂಚಿಸಲಾಗಿದೆ’ ಎಂದು ವಾದ ಮಾಡಲಾಗಿದೆ.
ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಕಾಲಾವಕಾಶ ಕೋರಿದ್ದಾರೆ. ಹಾಗಾಗಿ ನಾಳೆಗೆ ವಿಚಾರಣೆ ಮುಂದೂಡಿಕೆ ಆಗಿದೆ. ಅಕ್ಟೋಬರ್ 22ರಂದು ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಸದ್ಯಕ್ಕೆ ದರ್ಶನ್ ಅವರು ನಡೆಯಲು ಕೂಡ ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿ ಮಾಡಲು ಧನ್ವೀರ್ ಅವರು ಬಳ್ಳಾರಿ ಜೈಲಿಗೆ ಹೋಗಿದ್ದರು. ಆಗ ದರ್ಶನ್ ಅವರು ನಾಲ್ಕು ಹೆಜ್ಜೆ ಕೂಡ ನಡೆಯಲು ಕಷ್ಟಪಟ್ಟಿದ್ದು ಕಾಣಿಸಿತು. ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
comments
Log in to write reviews