ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಕೋರ್ಟ್ ನಿಂದ ಅರೆಸ್ಟ್ ವಾರಂಟ್ ಆದೇಶ!

ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಕೋರ್ಟ್ ನಿಂದ ಅರೆಸ್ಟ್ ವಾರಂಟ್ ಆದೇಶ!

2024-10-02 08:10:34

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮ ನಡೆದಿದೆ ಎಂದು ದೂರು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ ಅವರಿಗೇ ಇದೀಗ ಸಮಸ್ಯೆ ಎದುರಾಗಿದೆ.

ಹಳೆಯ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ 3ನೇ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಕ್ಟೋಬರ್‌ 1ರಂದು ಮಂಗಳವಾರ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಿದೆ.

ಮಂಗಳವಾರ ನಡೆದ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನಕ್ಕೆ ಆದೇಶವಾಗಿದೆ. ಸ್ನೇಹಮಯಿ ಕೃಷ್ಣ ವಿರುದ್ಧ 2015ರಲ್ಲಿ ಕುಮಾರ್‌ ಎಂಬುವವರು ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಸ್ನೇಹಮಯಿ ಕೃಷ್ಣಗೆ ಭದ್ರತೆ ನೀಡಲು ಪತ್ರ

ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಜೀವಕ್ಕೆ ಅಪಾಯವಿದ್ದು, ಅವರಿಗೆ ಪೊಲೀಸ್‌ ಭದ್ರತೆ ನೀಡುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ರಾಜ್ಯದಲ್ಲಿ ನಡೆದಿರುವ ಹಲವು ಭ್ರಷ್ಟಾಚಾರ ಪ್ರಕರಣಗಳು ಹಾಗೂ ಮುಖ್ಯವಾಗಿ ಮುಡಾ ಹಗರಣ ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಜೀವಕ್ಕೆ ಅಪಾಯವಿದ್ದು, ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಿಎಂ ವಿರುದ್ದ ಇಡಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೆ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ (ಇಡಿ) ದೂರು ನೀಡಿದ್ದರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಸ್ನೇಹಮಯಿ ಕೃಷ್ಣ ಅವರು ಇಡಿಗೆ ಸುದೀರ್ಘ ದೂರಿನ ಪತ್ರವನ್ನು ಬರೆದಿದ್ದರು. ಇ.ಡಿ ಕಚೇರಿಗೆ ಇ-ಮೇಲ್‌ ಮೂಲಕ ಇದನ್ನು ರವಾನಿಸಿದ್ದರು.

"ಲೋಕಾಯುಕ್ತದಲ್ಲಿ ಸಿಎಂ ವಿರುದ್ಧ ಪ್ರಕರಣ ದಾಖಲಾದ ಬಳಿಕ ಇಂತಹ ಅಕ್ರಮಗಳು ನಡೆದಿರಬಹುದು ಎಂಬ ಅನುಮಾನವಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೂ ಸಹ ದೂರು ನೀಡಲಾಗಿದೆ,’’ ಎಂದು ಸ್ನೇಹಮಯಿ ಕೃಷ್ಣ ಆ ಸಂದರ್ಭದಲ್ಲಿ ತಿಳಿಸಿದ್ದರು.

author single

L Ramprasad

Managing Director

comments

No Reviews